ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಿಜೆಪಿ ಮೇಲೆ ಕೆಜೆಪಿ ಪರಿಣಾಮ ಬೀರಲ್ಲ

Parashurama
Updated On : 1 Mar 2013, 10:27 am

ಮೈಸೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿಯ ಮೇಲೆ ಕೆಜೆಪಿಯ ಯಾವುದೇ ಪರಿಣಾಮ ಆಗುವುದಿಲ್ಲ. ಒಟ್ಟು ಸ್ಥಾನಗಳಲ್ಲಿ ಶೇ. 50 ರಷ್ಟು ಸ್ಥಾನಗಳನ್ನು ಪಕ್ಷ ಗಳಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಶುಕ್ರವಾರ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಮೂರು ಭಾಗವಾದರೂ ಪಕ್ಷದ ಶಕ್ತಿ ಕುಂದಿಲ್ಲ. ಬದಲಿಗೆ ವೃದ್ಧಿಯಾಗಿದೆ. ಬಿ. ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ಒಂದು ಜಿಲ್ಲೆಗೆ ಸೀಮಿತವಾಗಿದೆ. ಕೆಜೆಪಿ ಜೊತೆ ಹೆಚ್ಚಿನ ಶಾಸಕರು ಮತ್ತು ಕಾರ್ಯಕರ್ತರು ಹೋಗಿಲ್ಲ. ನನ್ನ ಜೊತೆ 70 ಶಾಸಕರು ಇದ್ದಾರೆ ಎನ್ನುತ್ತಿದ್ದವರು ಬ್ಲಾಕ್ಮೇಲ್ ಮಾಡಿ 12 ಮಂದಿಯನ್ನು ಮಾತ್ರ ಕರೆದುಕೊಂಡು ಹೋದರು. ಕೆಜೆಪಿಯವರ ವರ್ತನೆ ಕಂಡು ಜನರು ಆಕ್ರೋಶಭರಿತರಾಗಿದ್ದಾರೆ ಎಂದು ಪ್ರತಿಪಾದಿಸಿದರು.
ಗಲೀಜು ಹೊರಗೆ: ಕಳೆದ ಬಾರಿ ನಾವು 4900 ವಾರ್ಡ್ಗಳ ಪೈಕಿ 1411 ರಲ್ಲಿ ಜಯ ಗಳಿಸಿದ್ದವು. ಈ ಬಾರಿ ಶೇ.10 ರಿಂದ 15 ರಷ್ಟು ಹೆಚ್ಚು ಸ್ಥಾನಗಳನ್ನು ಗಳಿಸುತ್ತೇವೆ. ಪಕ್ಷಕ್ಕೆ ಒಳ್ಳೆಯ ಫಲಿತಾಂಶ ಸಿಗಲಿದೆ ಎಂದು ಅಪರು ಭವಿಷ್ಯ ನುಡಿದರು.
ಎಲ್ಲೆಡೆ ಯಾವುದೇ ಗೊಂದಲ ಇಲ್ಲದೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ನಮ್ಮದೇ ಆದ ಕಲ್ಪನೆ ಹೊಂದಿದ್ದೇವೆ ಎಂದು ಅವರು ಹೇಳಿದರು.
ಕಳೆದ ಅಕ್ಟೋಬರ್ ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದಿಲ್ಲ ಎಂದು ಕೆಲವರು ಹೇಳಿದ್ದರು. ಈಗಲೂ ಸರ್ಕಾರ ಇದೆ. ಅವಧಿಯನ್ನೂ ಪೂರ್ಣಗೊಳಿಸುತ್ತದೆ. ಗಲೀಜು ಹೊರಗೆ ಹೋಗಿದೆ. ಪರೋಕ್ಷವಾಗಿ ನಾವೆಲ್ಲರೂ ಇದಕ್ಕೆ ಕಾರಣಕರ್ತರಾಗಿದ್ದೇವೆ. ಈಗ ಪಕ್ಷ ಸ್ಪಚ್ಛವಾಗಿದೆ. ಮೈಸೂರಿನಲ್ಲಿ ಕೂಡ ಉಂಡು- ತಿಂದು ಹೋದವರೆಲ್ಲಾ ಮೊನ್ನೆ ಮೊನ್ನೆ ರ್ಯಾಲಿ ಮಾಡಿದ್ದಾರೆ ಎಂದು ಅವರು ಪರೋಕ್ಷವಾಗಿ ಮಾಜಿ ಸಚಿವ ಜಿ.ಟಿ. ದೇವೇಗೌಡರ ವಿರುದ್ಧ ಕಿಡಿಕಾರಿದರು.
ನಮಗೆ ಅಧಿಕಾರ ನೀಡಿದ ಮೂಲ ಕಾರ್ಯಕರ್ತರು ಬೇಸರ ಮಾಡಿಕೊಂಡಿದ್ದು ನಿಜ. ಇದೀಗ ಅವರಿಗೆ ಪರಿಸ್ಥಿತಿಯ ಮನವರಿಕೆ ಮಾಡಿಕೊಟ್ಟು ಮತ್ತೆ ವಿಶ್ವಾಸ ಗಳಿಸುತ್ತೇವೆ ಎಂದು ಸದಾನಂದಗೌಡ ಹೇಳಿದರು.
ಕಾಪುಸಿ ಕೂಡ ಇರಲ್ಲ: ಹುಟ್ಟಿದ ಮೂರೇ ತಿಂಗಳಲ್ಲಿ ಕೆಜೆಪಿಯಿಂದ ಕೆಲವರು ಹೊರಗೆ ಹೊರಟಿದ್ದಾರೆ.  ಯಡಿಯೂರಪ್ಪ ಅವರ ಆಪ್ತ ಕಾ.ಪು. ಸಿದ್ದಲಿಂಗಸ್ವಾಮಿ ಕೂಡ ಕೆಲವೇ ದಿನಗಳಲ್ಲಿ ಕೆಜೆಪಿಯಿಂದ ಹೊರಬಂದರೇ ಆಶ್ಚರ್ಯವಿಲ್ಲ ಎಂದು ಅವರು ಹೇಳಿದರು.
ಜನಮತಗಣನೆ ಅಲ್ಲ: ರಾಜ್ಯದ 207 ಸ್ಥಳೀಯ ಸಂಸ್ಥೆಗಳಲ್ಲಿ ಸುಮಾರು 85.50 ಲಕ್ಷ ಮತದಾರರು ಅಂದರೆ ರಾಜ್ಯದ ಒಟ್ಟು ಮತದಾರರ ಪೈಕಿ ಶೇ.32 ರಷ್ಟು ಮಂದಿ ಮತದಾನ ಮಾಡಿದರೂ ಇದು ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗದು. ಏಕೆಂದರೆ ಪ್ರತಿಯೊಂದು ಚುನಾವಣೆಯೂ ಬೇರೆ ಬೇರೆ ಮಾನದಂಡದ ಆಧಾರದ ಮೇಲೆ ನಡೆಯುತ್ತವೆ. ಈ ಚುನಾವಣೆಯಲ್ಲಿ ನಾವು ಶೇ. 50 ರಷ್ಟು ಸ್ಥಾನಗಳನ್ನೂ ಗಳಿಸಿದರೂ ಕೂಡ ಇದು ಜನಮತಗಣನೆ ಆಗುವುದಿಲ್ಲ ಎಂದು ಅವರು ಹೇಳಿದರು.
ಪಕ್ಷ ಚುನಾವಣೆ ಪರವಿತ್ತು... ಗುರುವಾರ ಮೈಸೂರಿನಲ್ಲಿ ಕೆಜೆಪಿ ಪರ ಪ್ರಚಾರ ಮಾಡಿದ ನಾಯಕಿಯೊಬ್ಬರು ಬಿಜೆಪಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಪರ ಇರಲಿಲ್ಲ ಎಂದು ಹೇಳಿದ್ದಾರೆ. ಆದರೆ, ನಮ್ಮ ಪಕ್ಷ ಚುನಾವಣೆ ನಡೆಸುವುದರ ಪರವಿತ್ತು. ಆದರೆ, ಮಹಿಳೆಯರಿಗೆ ಶೇ.50 ರಷ್ಟು ಸ್ಥಾನ ಕಲ್ಪಿಸಲು ಹಾಗೂ 2011ರ ಜನಗಣತಿ ಪ್ರಕಾರ ಪರಿಶಿಷ್ಟ ಜಾತಿ, ವರ್ಗ ಮತ್ತು ಇತರರಿಗೆ ಹೆಚ್ಚಿನ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ 2007ರ ಮೀಸಲಾತಿ ಪ್ರಕಾರ ಚುನಾವಣೆ ಬೇಡ ಎಂದು ಹೇಳಿತ್ತು. ವಿಧಾನಮಂಡಲದ ಎಲ್ಲಾ ಸದಸ್ಯರು ಇದರ ಪರವಾಗಿದ್ದರು ಎಂದು ಅವರು ಸ್ಪಷ್ಟಪಡಿಸಿದರು.
ಜೆಡಿಎಸ್ ಸೇರಲ್ಲ: ನಾನು ರಾಜಕೀಯ ಮಾಡುವುದಾದರೆ ಅದು ಬಿಜೆಪಿಯಲ್ಲೆ. ಯಾವುದೇ ಕಾರಣಕ್ಕೂ ಜೆಡಿಎಸ್ ಸೇರುವುದಿಲ್ಲ. ನಮ್ಮ ಹಳೆ ಗೆಳೆಯ ವಿ. ಧನಂಜಯಕುಮಾರ್ ಈ ರೀತಿ ಅಪಪ್ರಚಾರ ಮಾಡುವುದನ್ನು ನಿಲ್ಲಿಸಲಿ ಎಂದು ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಸಲಹೆ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments