ಧಾರ್ಮಿಕ ಸ್ಥಳಗಳಲ್ಲಿ ಪ್ರಚಾರ ಬೇಡ: ತಹಸೀಲ್ದಾರ್ ಸೂಚನೆ
ಹುಣಸೂರು: ಮಸೀದಿ, ಮಂದಿರ, ಚರ್ಚ್ಗಳನ್ನು ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡದಂತೆ ತಹಸೀಲ್ದಾರ್ ಶಿವಾನಂದಮೂರ್ತಿ ಎಚ್ಚರಿಕೆ ನೀಡಿದರು.
ಇಲ್ಲಿನ ಶಿಕ್ಷಕರ ಭವನದಲ್ಲಿ ಆಯೋಜಿಸಿದ್ದ ಪುರಸಭಾ ಚುನಾವಣಾ ಅಭ್ಯರ್ಥಿಗಳ ನೀತಿ ಸಂಹಿತೆ ಮಾಹಿತಿ ಸಭೆಯಲ್ಲಿ ಮಾತನಾಡಿ, ಸರ್ಕಾರಿ ಕಟ್ಟಡದ ಮೇಲೆ ಬ್ಯಾನರ್, ಬಂಟಿಂಗ್ಸ್ ಕಟ್ಟುವಂತಿಲ್ಲ. ಖಾಸಗಿ ಸ್ಥಳದಲ್ಲಿ ಕಟ್ಟಬೇಕಾದರೆ ಮಾಹಿತಿ ನೀಡಬೇಕು. ಅನುಮತಿ ಪಡೆದು ಹಾಕಿದ ಪೋಸ್ಟರ್ಗಳನ್ನು ಚುನಾವಣೆ ನಂತರ ಅಭ್ಯರ್ಥಿಗಳು ಸ್ವಂತ ಖರ್ಚಿನಿಂದ ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಅಭ್ಯರ್ಥಿಗಳ ಠೇವಣಿ ಹಣ ಮುಟ್ಟುಗೋಲು ಜೊತೆಗೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಂದರು.
ಕಾನೂನು ಕ್ರಮ: ಪಟ್ಟಣದ ಗಡಿಭಾಗ ಅಥವಾ ಹೊರವಲಯಗಳಲ್ಲಿ ಅಕ್ರಮ ಚಟುವಟಿಕೆ ಮದ್ಯ ಬಾಡೂಟ ಮತ್ತು ಇತರ ಚಟುವಟಿಕೆ ಕಂಡುಬಂದಲ್ಲಿ ಕ್ರಮ ಜರುಗಿಸಲಾಗುವುದು.
ಬಹಿರಂಗ ಪ್ರಸಾರಕ್ಕೆ ಮೇ 5 ರ ಬೆಳಗ್ಗೆ 7ಕ್ಕೆ ಅಂತ್ಯ, ಮನೆ ಮನೆ ಪ್ರಚಾರಕ್ಕೆ ಕೇವಲ 4 ಮಂದಿಗೆ ಮಾತ್ರ ಅವಕಾಶ ಇದೆ. ತಪ್ಪಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಕಡ್ಡಾಯ: ಮಾಧ್ಯಮಗಳಲ್ಲಿ ಪ್ರಚಾರ ಬಯಸುವವರು ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದಿರಬೇಕು. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ದಿನದಿಂದ ಮತ ಎಣಿಕೆವರೆಗೆ ಪ್ರತಿದಿನ ಖರ್ಚು ವೆಚ್ಚ, ಲೆಕ್ಕ ನೀಡಬೇಕು ಎಂದರು.
ಕೆಲವು ಅಭ್ಯರ್ಥಿಗಳು ಮಾತನಾಡಿ, ಗ್ರಾಮಾಂತರ ಪ್ರದೇಶದ ಜನರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿದ್ದಲ್ಲದೆ, ಒಂದು ವಾರ್ಡ್ನಿಂದ ಮತ್ತೊಂದು ವಾರ್ಡ್ಗೆ ಹೆಸರು ವರ್ಗಾವಣೆಗೊಂಡಿದೆ ಎಂದು ದೂರಿದರು.
ಜ. 16ರ ಕರಡು ಪ್ರತಿ ಅಂತಿಮ ಪಟ್ಟಿಯಾಗಿದ್ದು, ದೂರಿದರೆ ಲಿಖಿತವಾಗಿ ನೀಡಿ, ಪರಿಶೀಲಿಸುತ್ತೇವೆ ಎಂದು ತಹಸೀಲ್ದಾರ್ ತಿಳಿಸಿದರು. ಸಭೆಯಲ್ಲಿ ಇನ್ಸ್ಪೆಕ್ಟರ್ ಗಜೇಂದ್ರಪ್ರಸಾದ್, ಚುನಾವಣಾಧಿಕಾರಿಗಳಾದ ಗಣೇಶ್, ರಾಜಶೇಖರ್, ಸೋಮಯ್ಯ, ಪುರಸಭಾ ಮುಖ್ಯಾಧಿಕಾರಿ ಹರೀಶ್, ಅಬಕಾರಿ ಇನ್ಸ್ಪೆಕ್ಟರ್ ಉಮಾಶಂಕರ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.