ಯುವಕರಿಗೆ ಮಣೆ ಹಾಕುವರೇ ಮತದಾರ?
ಮೈಸೂರು: ಯುವಕರು ಹೆಚ್ಚು ಹೆಚ್ಚು ರಾಜಕೀಯದಲ್ಲಿ ತೊಡಗಬೇಕು ಎಂಬ ಕೂಗು ರಾಷ್ಟ್ರವ್ಯಾಪಿ ಎದ್ದಿರುವ ಬೆನ್ನಲ್ಲಿಯೇ ಮೈಸೂರು ನಗರ ಪಾಲಿಕೆ ಚುನಾವಣೆ ಸಮರದಲ್ಲಿ ಪ್ರಮುಖ ಮೂರು ಪಕ್ಷಗಳು ಸೇರಿದಂತೆ ಪಕ್ಷೇತರರಲ್ಲಿಯೂ ಯುವಕರು ಮತ್ತು ಯುವತಿಯರು ಹೆಚ್ಚಾಗಿ ಸ್ಪರ್ಧಿಸಿದ್ದಾರೆ.
ಪಾಲಿಕೆ ಚುನಾವಣಾ ಕಣದ ಕಿರಿಯ ಅಭ್ಯರ್ಥಿ ಸುಮೈಯಾ ಬೇಗಂ. ಈಕೆಗೆ 21 ವರ್ಷ ವಯಸ್ಸು. ಎಸ್ಸೆಸ್ಸೆಲ್ಸಿ ವ್ಯಾಸಂಗ ಮುಗಿಸಿ, ಮೊದಲ ಪಿಯು ವಿದ್ಯಾಭ್ಯಾಸ ಮೊಟಕುಗೊಳಿಸಿರುವ ಇವರು ನಗರ ಪಾಲಿಕೆಯ ಮಾಜಿ ಸದಸ್ಯೆ ಫರೀದಾ ಬೇಗಂ ಅವರ ಪುತ್ರಿ.
ಫರೀದಾ ಬೇಗಂಗೆ ಅನಾರೋಗ್ಯ ಇದ್ದ ಕಾರಣಕ್ಕೆ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. ಅಲ್ಲದೆ, ತಾವು ಈ ಹಿಂದೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದ ಕಾಂಗ್ರೆಸ್‌ಗೆ ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ಸಹ ತಿಳಿಸಿದ್ದರು. ಆದರೆ, ಸ್ಥಳೀಯರು ಕಡೆ ಗಳಿಗೆಯಲ್ಲಿ ಫರೀದಾ ಬೇಗಂ ಅವರ ಮನವೊಲಿಸಲು ಯತ್ನಿಸಿದರು. ಆದರೆ, ಅನಾರೋಗ್ಯ ಇರುವುದರಿಂದ ನನ್ನ ಬದಲಿಗೆ ತಮ್ಮ ಮಗಳು ಸುಮೈಯಾ ಬೇಗಂ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದರು. ಆದ್ದರಿಂದ ಸುಮೈಯಾ ಪಕ್ಷೇತರ ಅಭ್ಯರ್ಥಿಯಾಗಿ 46ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದಾರೆ.
ತಾಯಿ ಫರೀದಾ ಬೇಗಂ ಅವಿದ್ಯಾವಂತರಾದ್ದರಿಂದ ಪಾಲಿಕೆಗೆ ಸಂಬಂಧಿಸಿದ ಅನೇಕ ಕೆಲಸಗಳನ್ನು ಸುಮೈಯಾ ಮಾಡಿಸುತ್ತಿದ್ದರು. ಇದಕ್ಕೆ ತಂದೆ ಇಲಿಯಾಸ್ ಅಹಮದ್ ಅವರೂ ಸಹಕಾರ ನೀಡುತ್ತಿದ್ದರು. ಸ್ಥಳೀಯವಾಗಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ ಅನುಭವ ಹೊಂದಿರುವ ಸುಮೈಯ ಜನ ಮೆಚ್ಚುಗೆ ಪಡೆದಿದ್ದಾರೆ. ಜ್ಞಾನಗಂಗೋತ್ರಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿರುವ ಸುಮೈಯಾ ಕಿರಿಯ ವಯಸ್ಸಿನಲ್ಲಿಯೇ ಪಾಲಿಕೆ ಸದಸ್ಯರಾಗುವ ಹೆಬ್ಬಯಕೆಯೊಂದಿಗೆ ಕಣಕ್ಕಿಳಿದಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ದೀಪಕ್‌ಗೆ ಈಗ 27 ವರ್ಷ. 2 ವರ್ಷಗಳ ಹಿಂದೆಯಷ್ಟೇ ಬಿಜೆಪಿ ಸೇರಿದ್ದರು. ಉದ್ಯಮಿಗಳ ಬಳಿ ಕೆಲಸ ಮಾಡಿಕೊಂಡಿದ್ದ ದೀಪಕ್‌ಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ಆದರೆ, ಬಿಜೆಪಿಯ ತತ್ವ- ಸಿದ್ಧಾಂತ ಒಪ್ಪಿ ಕಳೆದ 2 ವರ್ಷಗಳಿಂದ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾಗಿ ಹೇಳುತ್ತಾರೆ. ಎಸ್ಸೆಸ್ಸೆಲ್ಸಿ ವ್ಯಾಸಂಗ ಮುಗಿಸಿರುವ ದೀಪಕ್ ಅನೇಕ ಸಂಘ- ಸಂಸ್ಥೆಯ ಜೊತೆಯಲ್ಲೂ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಅವರು 12ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಇನ್ನು ಕಾಂಗ್ರೆಸ್‌ನಿಂದ ಯುವ ಕಲಾವಿದ ಬಾದಲ್ ನಂಜುಂಡಸ್ವಾಮಿ ಕಣಕ್ಕಿಳಿದಿದ್ದಾರೆ. ಕಾವಾದಲ್ಲಿ ಚಿತ್ರಕಲೆಯಲ್ಲಿ ಬಿಎಫ್‌ಎ ಪದವಿ ಪಡೆದಿರುವ ಬಾದಲ್ ಅವರು ಮೈಸೂರು ವಿವಿ ಚಿನ್ನದ ಪದಕ ಸಹ ಪಡೆದುಕೊಂಡಿದ್ದಾರೆ. ಕಾವೇರಿ ಸಮಸ್ಯೆ, ಬರಗಾಲ ಮತ್ತು ಅನೇಕ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಕೆ.ಆರ್. ವೃತ್ತದಲ್ಲಿ ತಮ್ಮದೇ ಗೆಳೆಯರ ಬಳಗದೊಂದಿಗೆ ವಿವಿಧ ಚಿತ್ರ ಬಿಡಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದರು. ರಂಗಾಯಣದಲ್ಲಿದ್ದುಕೊಂಡು ಅನೇಕ ತ್ರಿಡಿ ಚಿತ್ರ ಬಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಬಾದಲ್ ನಂಜುಂಡಸ್ವಾಮಿ ಕಾಂಗ್ರೆಸ್ ಅಭ್ಯರ್ಥಿಯಾಗಿ 20ನೇ ವಾರ್ಡ್‌ನಿಂದ ಕಣಕ್ಕೆ ಇಳಿದಿದ್ದಾರೆ.
ಕುಕ್ಕರಹಳ್ಳಿ ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಚಿರಪರಿಚಿತನಾದ ಬಾದಲ್ ಸಭ್ಯ ಹಾಗೂ ಪರಿಸರದ ಬಗ್ಗೆ ಅಪಾರ ಕಾಳಜಿಯುಳ್ಳ ವ್ಯಕ್ತಿ. ಜಾಗತಿಕ ತಾಪಮಾನ, ಮಾಲಿನ್ಯ ಮುಂತಾದ ವಿಷಯಗಳ ಬಗ್ಗೆ ಆತ ಅಪಾರ ಕಳಕಳಿ ಹೊಂದಿದ್ದಾರೆ. ಕಳೆದ 2007ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಾದಲ್ 800 ಮತಗಳ ಅಂತರದಿಂದ ಪರಾಭವಗೊಂಡಿದ್ದರು.
ಜೆಡಿಎಸ್‌ನ ರಾಮುಗೆ ಈಗ 33 ವರ್ಷ. ದಳವಾಯಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದಿರುವ ರಾಮು ಮೊಬೈಲ್ ವ್ಯಾಪಾರದಲ್ಲಿ ತೊಡಗಿದ್ದರು. ಇವರ ತಂದೆ ನಾಲಾ ಬೀದಿಯ ಶ್ರೀರಾಮ ಮಂದಿರದ ಯಜಮಾನರು. ಈಗಲೂ ಇವರ ಮನೆತನಕ್ಕೆ ಆ ಪಟ್ಟ ಇದೆ. ಜೆಡಿಎಸ್‌ನಲ್ಲಿ ಕಳೆದ 15 ವರ್ಷಗಳಿಂದ ಸಕ್ರಿಯರಾಗಿ ದುಡಿಯುತ್ತಿರುವ ರಾಮು ನಗರ ಪಾಲಿಕೆಯ 1ನೇ ವಾರ್ಡಿನ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಒಟ್ಟಾರೆ 30 ವರ್ಷ ಆಸುಪಾಸಿನ ಯುವಕರು ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಪಕ್ಷೇತರರಲ್ಲಿ ಕಾಣಿಸಿಕೊಂಡಿದ್ದಾರೆ. ಯುವಕರ ರಾಜಕೀಯ ಉತ್ಸಾಹಕ್ಕೆ ಮತದಾರರು ಹೇಗೆ ಸ್ಪಂದಿಸುತ್ತಾರೆ ಎಂಬುದು ಚುನಾವಣೆ ನಂತರದ ಫಲಿತಾಂಶದಿಂದಷ್ಟೇ ಗೊತ್ತಾಗಬೇಕಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.