ಕುಡಿಯುವ ನೀರಿಗೆ ಮೀಟರ್ ಕಡ್ಡಾಯ
ಕ.ಪ್ರ.ವಾರ್ತೆ ಮೈಸೂರು ಮಾ.19
ಕುಡಿಯುವ ನೀರು ಸಮಸ್ಯೆ ಪರಿಹರಿಸಲು ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮೀಟರ್ ಅಳವಡಿಕೆ ಕಡ್ಡಾಯ ಮಾಡಬೇಕು ಎಂದು 3ನೇ ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳ ಅನುಷ್ಠಾನ ಕಾರ್ಯಪಡೆ ಅಧ್ಯಕ್ಷ ಎ.ಜಿ. ಕೊಡ್ಗಿ ಅಭಿಪ್ರಾಯಪಟ್ಟರು.
ಮೈಸೂರು ಜಿಪಂ ಸಭಾಂಗಣದಲ್ಲಿ ಮಂಗಳವಾರ ಆಯೋಗದ ಶಿಫಾರಸುಗಳ ಅನುಷ್ಠಾನ ಕಾರ್ಯಪಡೆ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆಯೇ ಮೀಟರ್ ಅಳವಡಿಕೆ ಕಡ್ಡಾಯ ಮಾಡಿದ್ದರೂ ಯಾರು ಅನುಷ್ಠಾನ ಮಾಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಾರಿ ಕುಡಿಯುವ ನೀರಿನ ಸಮಸ್ಯೆಯೂ ಗಂಭೀರ ಆಗಲಿದೆ. ಇದರ ಜತೆಗೆ ಹೊಸ ಸಮಸ್ಯೆಗಳು ಉಂಟಾಗಲಿವೆ. ಕುಡಿಯುವ ನೀರಿನ ವಿತರಣೆ ಸರಿಯಾಗಬೇಕಿದ್ದರೆ ಮೀಟರ್ ಅಳವಡಿಕೆ ಕಡ್ಡಾಯ ಆಗಬೇಕು. ಮೈಸೂರು ಜಿಲ್ಲೆಯಲ್ಲಿ ಮೀಟರ್ ಅಳವಡಿಕೆ ಆಗಿಲ್ಲ. ಈ ವಿಚಾರದಲ್ಲಿ ವಿಳಂಬ ಮಾಡಿರುವುದು ಸರಿಯಲ್ಲ. ಮೀಟರ್ ಅಳಡಿಸದಿದ್ದರೆ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಸಾಕಷ್ಟು ವೆಚ್ಚ ಮಾಡಿಲ್ಲ. ಈ ಯೋಜನೆ ಮೂಲಕ ಉದ್ಯೋಗದ ಜತೆಗೆ ಬಡತನ ಸಹ ನಿರ್ಮೂಲನೆ ಮಾಡಬಹುದು. ಕೆಲವು ಯೋಜನೆಗಳ ಹಣ ಉಳಿದಿವೆ. ಸರ್ಕಾರಿ ಹಣ ಸಂಪೂರ್ಣ ಬಳಕೆ, ಕ್ರಿಯಾ ಯೋಜನೆ ರೂಪಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ ಎಂದರು.
ಆಯೋಗದಿಂದ ಈಗಾಗಲೇ 2 ಮಧ್ಯಂತರ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಅಂತಿಮ ವರದಿಯನ್ನು ಇನ್ನು ಒಂದು ತಿಂಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಅನುದಾನ ಹೆಚ್ಚಳಕ್ಕೆ ಶಿಫಾರಸು: 3ನೇ ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳ ಅನುಷ್ಠಾನ ಕಾರ್ಯಪಡೆಯ ಸದಸ್ಯ ಟಿ. ತಿಮ್ಮೇಗೌಡ ಮಾತನಾಡಿ, ಆಯೋಗದ ಶಿಫಾರಸಿನಿಂದ ರಾಜ್ಯದ ಪ್ರತಿ ಜಿಪಂಗೆ ತಲಾ 2 ಕೋಟಿ ಹಾಗೂ ತಾಪಂಗೆ ತಲಾ 1 ಕೋಟಿ ಅನುದಾನವನ್ನು ಪ್ರತಿ ವರ್ಷ ಸರ್ಕಾರ ನೀಡುತ್ತಿದೆ. ಆಯೋಗದ ಅಂತಿಮ ವರದಿಯಲ್ಲಿ ಈ ಅನುದಾನ ಮೊತ್ತ ಹೆಚ್ಚಿಸಲು ಶಿಫಾರಸು ಮಾಡಲಾಗುವುದು ಎಂದು ಹೇಳಿದರು.
ಮೈಸೂರು ಜಿಲ್ಲೆಯಲ್ಲಿ ಸಿಎಂಜಿಎಸ್ವೈ ಯೋಜನೆಯಡಿ 4.20 ಕೋಟಿ ಅನುದಾನ ಹಂಚಿಕೆ ಆಗಿದ್ದು, ಇದರಲ್ಲಿ 1.76 ಕೋಟಿ ಮಾತ್ರ ವೆಚ್ಚ ಮಾಡಲಾಗಿದೆ. ಲಮ್ಸಮ್ ಗ್ರ್ಯಾಂಟ್ ಯೋಜನೆಯಲ್ಲಿ 11.08 ಕೋಟಿ ಅನುದಾನ ಹಂಚಿಕೆಯಾಗಿದ್ದು, 1 ಕೋಟಿ ಬಿಡುಗಡೆ ಆಗಿದೆ. ಇದರಲ್ಲಿ ಕೈಗೊಂಡಿರುವ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
13ನೇ ಹಣಕಾಸು ಯೋಜನೆಯ ರಸ್ತೆ ಕಾಮಗಾರಿಗಳಿಗಾಗಿ 3.74 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕೇವಲ 37.90 ಲಕ್ಷ ಮಾತ್ರ ವೆಚ್ಚ ಮಾಡಲಾಗಿದೆ. ಇಂದಿರಾ ಆವಾಸ್ ವಸತಿ ಯೋಜನೆಯಡಿ 5104 ಭೌತಿಕ ಗುರಿ ನೀಡಲಾಗಿದ್ದು, 4582 ಫಲಾನುಭವಿಗಳಿಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ 70 ಮನೆ ನಿರ್ಮಾಣ ಪೂರ್ಣಗೊಂಡಿದ್ದು, 1054 ಮನೆಗಳು ಪ್ರಗತಿಯಲ್ಲಿವೆ. 3458 ಮನೆಗಳ ಕಾಮಗಾರಿ ಆರಂಭಿಸಬೇಕಿದೆ ಎಂದು ತಿಳಿಸಿದರು.
ಬಸವ ವಸತಿ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ 74,988 ಭೌತಿಕ ಗುರಿ ನಿಗದಿಪಡಿಸಲಾಗಿದ್ದು, 32,959 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ 6229 ಮನೆ ನಿರ್ಮಾಣ ಪೂರ್ಣಗೊಂಡಿದ್ದು, 13,086 ಮನೆಗಳು ನಿರ್ಮಾಣ ಪ್ರಗತಿಯಲ್ಲಿವೆ. 13,644 ಮನೆಗಳ ಕಾಮಗಾರಿ ಆರಂಭಿಸಬೇಕಿದೆ ಎಂದರು.
ಗ್ರಾಮೀಣ ಕುಡಿಯುವ ನೀರಿನ ಯೋಜನೆ ಕಾರ್ಯಕ್ರಮದಲ್ಲಿ ಐಎಂಐಎಸ್ ಅಡಿ 76.06 ಕೋಟಿ ಹಾಗೂ ಕಂಟಿನ್ಜೆಂಟ್ ಕ್ರಿಯಾ ಯೋಜನೆಯಡಿ 13.74 ಕೋಟಿ ಸೇರಿ ಒಟ್ಟು 89.80 ಕೋಟಿ ಅನುದಾನ ನೀಡಲಾಗಿದೆ. ಈ ಯೋಜನೆಗಳಡಿಯಲ್ಲಿ 882 ಕಾಮಗಾರಿಗಳಿಗೆ 40.31 ಕೋಟಿ ಮಾತ್ರ ವೆಚ್ಚ ಮಾಡಲಾಗಿದ್ದು, ಕೇವಲ 60 ಲಕ್ಷ ಮಾತ್ರ ಬಿಡುಗಡೆ ಮಾಡಲಾಗಿದೆ. ಉಳಿದ ಹಣವನ್ನು ಹಂತ ಹಂತವಾಗಿ ಬಿಡುಗಡೆಗೊಳಿಸುವುದಾಗಿ ಜಿಪಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಅವರು ವಿವರಿಸಿದರು.
ಏಪ್ರಿಲ್ ಮತ್ತು ಮೇನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ. ಇದಕ್ಕಾಗಿ ಪೂರ್ವಸಿದ್ಧತೆ ಕೈಗೊಳ್ಳಲು ಜಿಪಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನದಿ, ಕಾಲುವೆ ಮೂಲಕ ನೀರು ಪಡೆದುಕೊಳ್ಳಲು ಶಿಫಾರಸು ಮಾಡಲಾಗುವುದು ಎಂದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷ ಕಾ.ಪು. ಸಿದ್ದವೀರಪ್ಪ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.