ನೂತನ ಸದಸ್ಯರ ಮುಂದಿವೆ ನೂರು ಸವಾಲು
ಮೈಸೂರು: ನೂರ ಐವತ್ತು ವರ್ಷಗಳ ಇತಿಹಾಸವಿರುವ ಮೈಸೂರು ನಗರಪಾಲಿಕೆಯ ಚುನಾವಣೆ ಮುಗಿದಿದೆ. ಹೊಸ ಸದಸ್ಯರು ಆಯ್ಕೆಯಾಗಿದ್ದಾರೆ. ಅವರ ಆಯ್ಕೆ ವಿಷಯ ರಾಜ್ಯಪತ್ರದಲ್ಲಿ ಪ್ರಕಟವಾಗಬೇಕು. ರಾಜ್ಯ ಸರ್ಕಾರ ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ಮೀಸಲಾತಿ ಪ್ರಕಟಿಸಬೇಕು. ನಂತರ ಪ್ರಾದೇಶಿಕ ಆಯುಕ್ತರು ವಿಶೇಷ ಸಭೆ ಕರೆಯಬೇಕು. ಮೊದಲ ಸಭೆಯಲ್ಲಿ ಸದಸ್ಯರೆಲ್ಲರೂ ಪ್ರಮಾಣವಚನ ಸ್ವೀಕರಿಸಬೇಕು. ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯಾಗಬೇಕು. ಅಲ್ಲಿಂದ ಅವರ ಐದು ವರ್ಷಗಳ ಸದಸ್ಯತ್ವದ ಅವಧಿ ಆರಂಭ.
ರಾಜ್ಯ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿದೆ. ಯಾವಾಗಬೇಕಾದರೂ ಚುನಾವಣಾ ದಿನಾಂಕ ಪ್ರಕಟವಾಗಬಹುದು. ಹಾಗಾದಲ್ಲಿ ಮೇಯರ್ ಹಾಗೂ ಉಪ ಮೇಯರ್ ಆಯ್ಕೆ ಮುಂದಕ್ಕೆ ಹೋಗುತ್ತದೆ. ಇವೆಲ್ಲಾ ಗೊತ್ತಿದ್ದರೂ ಪಾಲಿಕೆ ಸದಸ್ಯರಾಗಿ ಚುನಾಯಿತರಾಗಿರುವವರ ಬಳಿಗೆ ಆಯಾ ವಾರ್ಡ್ನ ಸಾರ್ವಜನಿಕರು ಎಡತಾಕುತ್ತಿದ್ದಾರೆ. ಅವರು ಸಮಸ್ಯೆಗಳನ್ನು ಕೇಳಿಕೊಂಡು, ಪರಿಹರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳು ಕೂಡ ಹೊಸ ಸದಸ್ಯರ ಮಾತಿಗೆ ಸ್ಪಂದಿಸುತ್ತಿದ್ದಾರೆ. ಇದು ಅಧಿಕೃತವಾಗಬೇಕಷ್ಟೇ.
ಇನ್ನೂ ಪಾಲಿಕೆ ಮೊಬೈಲ್ ನೀಡಿಲ್ಲ: ಪಾಲಿಕೆ ಸದಸ್ಯರು ಪ್ರಮಾಣವಚನ ಸ್ವೀಕರಿಸುವ ತನಕ ಅಧಿಕೃತ ಮೊಬೈಲ್ ನೀಡಲ್ಲ. ಪಾಲಿಕೆಯ ಎಲ್ಲಾ ಸದಸ್ಯರಿಗೂ 94498 410್ಢ್ಢ ಸಂಖ್ಯೆಯ ಮೊಬೈಲ್ ನೀಡಲಾಗುತ್ತದೆ. ಕೊನೆಯ ಎರಡು ಸಂಖ್ಯೆ ಆಯಾ ವಾರ್ಡ್ನ ಸಂಖ್ಯೆಯಾಗಿರುತ್ತದೆ. ಅಲ್ಲಿಯವರೆಗೆ ಆಯಾ ವಾರ್ಡ್ ಸದಸ್ಯರು ನೀಡಿರುವ ಖಾಸಗಿ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಸಿ, ಸಾರ್ವಜನಿಕರು ದೂರು ಹೇಳಿಕೊಳ್ಳಬಹುದು.
ನಾಲಾ ಬೀದಿಯಿಂದ ನಂಜನಗೂಡು ರಸ್ತೆ, ಎಂ.ಜಿ. ರಸ್ತೆಯಿಂದ ರಾಮಾನುಜ ರಸ್ತೆವರೆಗೆ ಹರಡಿಕೊಂಡಿರುವ 1ನೇ ವಾರ್ಡ್ನಲ್ಲಿ ಸುಮಾರು ಅರ್ಧ ಕಿ.ಮಿ. ದೊಡ್ಡ ಮೋರಿ ಸಾಗುತ್ತದೆ. ಅದಕ್ಕೆ ಒಳಚರಂಡಿಗಳ ನೀರು ಸೇರಿಕೊಂಡು ಅಕ್ಕಪಕ್ಕದ ನಿವಾಸಿಗಳು ಅಸಹ್ಯ ವಾಸನೆ ಮತ್ತು ಸೊಳ್ಳೆಗಳ ಕಾಟದಿಂದ ಬಳಲುತ್ತಿದ್ದಾರೆ. ರಾಮಸ್ವಾಮಿ ವೃತ್ತ, ನಾಲಾ ಬೀದಿ ಕಡೆಯಿಂದ ಹರಿದು ಬರುವ ಮಳೆ ನೀರು ಶ್ರೀಕಾಂತ ಶಾಲೆಯ ಬಳಿ ನಿಲ್ಲುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಆದ್ಯತೆ.
-ಅಂಶಿ ಪ್ರಸನ್ನಕುಮಾರ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.