ಮಹಾ ಮೋಸಗಾರ ರಾಮದಾಸ್: ಎಂ.ಕೆ. ಸೋಮಶೇಖರ್ ಆರೋಪ
ಕ.ಪ್ರ.ವಾರ್ತೆ ಮೈಸೂರು ಮಾ.19
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಮಹಾ ಮೋಸಗಾರ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಆರೋಪಿಸಿದರು.
ರಾಜ್ಯದ 224 ಕ್ಷೇತ್ರಗಳಲ್ಲಿ ಇಲ್ಲದ ಸ್ವಂತ ಸೂರಿನ ಊರು ಯೋಜನೆಯನ್ನು ಇಲ್ಲಿ ಸಾಕಾರಗೊಳಿಸುವುದಾಗಿ ಹೇಳಿ ಬಡಜನರಿಂದ ಅರ್ಜಿಗೆ 100 ವಸೂಲಿ ಮಾಡುತ್ತಿರುವುದು ಅನ್ಯಾಯ. ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ಕ್ಷೇತ್ರದ ಬಾಡಿಗೆ ಮನೆಯಲ್ಲಿರುವವರಿಗೆ 12 ಸಾವಿರ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಹೇಳುತ್ತಿರುವುದು ಬರೀ ಸುಳ್ಳು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಎಂಡಿಎನಲ್ಲಿ ನಿವೇಶನ ಕೋರಿ 1.47 ಲಕ್ಷ ಅರ್ಜಿಗಳು ಹಾಗೂ ಆಶ್ರಯ ಯೋಜನೆಗೆ ಹಣ ಕಟ್ಟಿರುವ 4 ಸಾವಿರ ಮಂದಿ ಕಳೆದ 15 ವರ್ಷಗಳಿಂದ ಕಾಯುತ್ತಿದ್ದಾರೆ. ಸ್ವಂತ ಸೂರಿನ ಊರು ಮೈಸೂರು ಯೋಜನೆಗೆ ಸರ್ಕಾರ ಮಂಜೂರಾತಿ ನೀಡಿಲ್ಲ ಹಾಗೂ ಇದರ ಅನುಷ್ಠಾನಕ್ಕೆ ಜಾಗ ಎಲ್ಲಿದೆ ಎಂದು ಪ್ರಶ್ನಿಸಿದ ಅವರು, ಈ ಬಾರಿಯ ಸೋಲಿನ ಭೀತಿಯಿಂದ ಇಂತಹ ತಂತ್ರಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿದ್ದಾಗ, ಸಚಿವರಾದ ಮೇಲೂ ಬಡಜನರ ಮೇಲೆ ಇಲ್ಲದ ಈ ಕಾಳಜಿ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಂದಿರುವುದು ಕೇವಲ ಬೂಟಾಟಿಕೆ. ಜನರಿಗೆ ಆಶ್ವಾಸನೆ ನೀಡುತ್ತಿರುವ ಬೊಗಳೆದಾಸ ರಾಮದಾಸ ಅವರ ಮಾತನ್ನು ಜನರು ನಂಬಿ ಮೋಸ ಹೋಗಬಾರದು. ಕೇವಲ 1 ಎಕರೆ ನೀಡಲು ಎಂಡಿಎ ಬಳಿ ಜಾಗವಿಲ್ಲ ಎಂದರು.
ರಾಮದಾಸ್ ಅವರ ಭೂ ಹಗರಣ ಸೇರಿದಂತೆ ಅನೇಕ ಭ್ರಷ್ಟಾಚಾರದ ಪ್ರಕರಣಗಳಿವೆ. ಈಗಾಗಲೇ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ ಎಂದ ಅವರು, ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರು ಈ ವಸತಿ ಯೋಜನೆಯಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ನಗರ ಪಾಲಿಕೆ ಸದಸ್ಯರಾದ ಸುನಿಲ್ ಕುಮಾರ್, ಸುನಿಲ್, ಮುಖಂಡ ರವಿಶಂಕರ್ ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.