ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ
ಪಿರಿಯಾಪಟ್ಟಣ: ತಾಲೂಕಿನ ಪಂಚವಳ್ಳಿ, ಹಲಗನಹಳ್ಳಿ ಮತ್ತು ಮಲಿಯೂರು ಗ್ರಾಪಂ ಗ್ರಂಥಾಲಯಗಳಲ್ಲಿ ಖಾಲಿಯಿರುವ ಮೇಲ್ವಿಚಾರಕರ ಹುದ್ದೆಗಾಗಿ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ ಮಾಸಿಕ 2500 ಗೌರವ ಸಂಭಾವನೆ ನೀಡಲಾಗುವುದು. ಪಂಚವಳ್ಳಿ ಹುದ್ದೆ ಪರಿಶಿಷ್ಟ ಜಾತಿ(ಮಹಿಳೆ) ಹಾಗೂ ಹಲಗನಹಳ್ಳಿ ಮತ್ತು ಮಲಿಯೂರು ಹುದ್ದೆಗಳ ಸಾಮಾನ್ಯ ವರ್ಗಕ್ಕೆ ಮೀಸಲಿವೆ.
ಅಭ್ಯರ್ಥಿಗಳು ಅರ್ಜಿ ನಮೂನೆಗಳನ್ನು ಸಂಬಂಧಿಸಿದ ಗ್ರಾಪಂ ಕಚೇರಿಯಿಂದ ಅಥವಾ ತಾಲೂಕಿನ ಶಾಖಾ ಗ್ರಂಥಾಲಯ ಕಚೇರಿಯಿಂದ ಪಡೆದು ವಿವರ ಭರ್ತಿ ಮಾಡಿ, ಜನ್ಮ ದಿನಾಂಕ, ವಿದ್ಯಾರ್ಹತೆ, ಮೀಸಲಾತಿ, ಸಂಬಂಧಿಸಿದ ಗ್ರಾಪಂ ವಾಸಸ್ಥಳ ದೃಢೀಕರಣ, ಅನುಭವ, ತರಬೇತಿ ಇನ್ನಿತರ ಅವಶ್ಯಕ ಪ್ರಮಾಣ ಪತ್ರಗಳ ದೃಢಿಕೃತ ಪ್ರತಿಯೊಂದಿಗೆ ಏ.4 ರೊಳಗೆ ಅರ್ಜಿಗಳನ್ನು ಸಂಬಂಧಿಸಿದ ಗ್ರಾಪಂ ಕಚೇರಿ ಮುಖಾಂತರ ಕಳುಹಿಸಬೇಕು.
ಮುಂದುವರಿಕೆ ಕಲಿಕಾ ಕೇಂದ್ರಗಳಲ್ಲಿ ಪ್ರೇರಕ, ಸಹಪ್ರೇರಕರಾಗಿ ಕಾರ್ಯ ನಿರ್ವಹಿಸಿರುವವರಿಗೆ ಮತ್ತು ಗ್ರಂಥಾಲಯ ವಿಜ್ಞಾನದಲ್ಲಿ ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ಸಂಬಂಧಿಸಿದ ಗ್ರಾಪಂ, ಆಯಾ ತಾಲೂಕಿನ ಶಾಖಾ ಗ್ರಂಥಾಲಯ ಅಧಿಕಾರಿಗಳನ್ನು ಸಂಪರ್ಕಿಸಲು ಮೈಸೂರು ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕರು ಕೋರಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.