ಹೆಸರಿಗೆ ಮಾತ್ರ ಕುಡಿವ ನೀರು 24x7
ಕ.ಪ್ರ ವಾರ್ತೆ ಮೈಸೂರು ಮಾ.21
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಗೆದ್ದು ನಗರಪಾಲಿಕೆ ಪ್ರವೇಶಿಸಿರುವ ನೂತನ ಸದಸ್ಯರಿಗೆ ತಮ್ಮ ವಾರ್ಡಿನಲ್ಲಿ ಗುಂಡಿ ಬಿದ್ದು ಹಾಳಾಗಿರುವ ರಸ್ತೆದುರಸ್ತಿ ಮಾಡಿಸುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಜಸ್ಕೋದವರು ಮನೆಗಳಿಗೆ 24್ಢ7 ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ರಸ್ತೆ ಅಗೆದು ಹಾಳು ಮಾಡಿದ್ದಾರೆ. ಅತ್ತ 24 ಗಂಟೆ ನೀರೂ ಇಲ್ಲ, ಇತ್ತ ರಸ್ತೆಗಳೆಲ್ಲಾ ಹಾಳಾಗಿವೆ ಎಂದು ಪಾಲಿಕೆ ಸದಸ್ಯರಲ್ಲದೇ ಜನರೂ ಹಿಡಿಶಾಪ ಹಾಕುತ್ತಿದ್ದಾರೆ. ಪಾಲಿಕೆ ವಾರ್ಡ್ ನಂ. 11 ರಿಂದ 15ರ ವ್ಯಾಪ್ತಿಯಲ್ಲಿ ಬಹುಪಾಲು ರಸ್ತೆಗಳು ಹದಗೆಟ್ಟಿವೆ. ನೀರಿನ ಸಮಸ್ಯೆಯೂ ಇಲ್ಲಿ ತಲೆದೋರಿದೆ. ಕೆಲವೆಡೆ ಯುಜಿಡಿ ಸಂಪರ್ಕ ಸಮರ್ಪಕವಾಗಿ ಆಗದೆ ಸಮಸ್ಯೆಯಾಗಿದೆ. ಈಗ ಗೆದ್ದಿರುವ ಪಾಲಿಕೆ ಸದಸ್ಯರು ಕೆಲವು ದಿನಗಳ ಹಿಂದೆ ಮತ ಕೇಳಲು ಹೋದಾಗ ಇಂತಹ ಅನೇಕ ಮನವಿ ಸಲ್ಲಿಕೆಯಾಗಿದ್ದವು. ಅವುಗಳನ್ನು ಈಡೇರಿಸುವ ಭರವಸೆ ನೀಡಿದ್ದ ಇವರು ಇದೀಗ ಕಾರ್ಯರೂಪಕ್ಕೆ ತರಬೇಕಿದೆ.
ವಾಗ್ದಾನ ಈಡೇರಿಸುತ್ತೇನೆ
ನನ್ನ ವಾರ್ಡಿನ ವ್ಯಾಪ್ತಿಯಲ್ಲಿ ಬೀದಿ ದೀಪಗಳು ಹಾಳಾಗಿದ್ದವು. ಸ್ಟರ್ಲಿಂಗ್ ಚಿತ್ರಮಂದಿರದ ಮುಖ್ಯರಸ್ತೆ ತೀರಾ ಹದಗೆಟ್ಟಿದೆ. ಕೆಲವು ಮನೆಗಳಲ್ಲಿ ನೀರು ಬರುತ್ತಿಲ್ಲ. ನಾನು ಮತ ಕೇಳಲು ಹೋದಾಗ ಈ ಸಮಸ್ಯೆಗಳು ಎದುರಾದವು. ಆಗ ವಾಗ್ದಾನ ನೀಡಿದಂತೆ ಕಾರ್ಯರೂಪಕ್ಕೆ ತರುತ್ತೇನೆ. ಜನರು ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ್ದಾರೆ. ಇಲ್ಲಿನ ಧರಂಸಿಂಗ್ ಕಾಲೋನಿ, ಡಿ. ದೇವರಾಜ ಅರಸು ಕಾಲೋನಿಗಳಲ್ಲಿ ಮೂಲ ಸೌಕರ್ಯದ ಕೊರತೆ ಇದೆ.
ವಾರ್ಡ್ ವ್ಯಾಪ್ತಿ: ವಿದ್ಯಾರಣ್ಯಪುರಂ 16ನೇ ತಿರುವಿನಿಂದ ಜೆ.ಪಿ. ನಗರದ ಸಿ ಬ್ಲಾಕ್, ಪೊಲೀಸ್ ಠಾಣೆ, ವಿಶ್ವೇಶ್ವರನಗರ ಕೈಗಾರಿಕ ಪ್ರದೇಶ, ಶನಿ ಮಹಾತ್ಮ ದೇವಸ್ಥಾನ ಸುತ್ತಮುತ್ತ.
ಸಮಸ್ಯೆ ಪರಿಹಾರಕ್ಕೆ ಯತ್ನ
ಪಾಲಿಕೆಯಲ್ಲಿಯೇ ಅತ್ಯಂತ ದೊಡ್ಡ ಕ್ಷೇತ್ರವಾದ ನನ್ನ ವಾರ್ಡಿನಲ್ಲಿ 21 ಸಾವಿರ ಮತದಾರರಿದ್ದಾರೆ. ಸುಮಾರು 5 ಸಾವಿರ ಮನೆಗಳಿಗೆ ನರ್ಮ್ ಯೋಜನೆಯಡಿ ಕಪಿಲಾ ನದಿಯಿಂದ ಕುಡಿಯುವ ನೀರು ಒದಗಿಸಲಾಗಿದೆ. ಸಾಕಷ್ಟು ರಸ್ತೆಗಳನ್ನು ಜಸ್ಕೋದವರು ಹಾಳು ಮಾಡಿದ್ದಾರೆ. ಅವರೇ ದುರಸ್ತಿ ಮಾಡಬೇಕು. ಕೆಲವು ಉದ್ಯಾನಗಳು ಇನ್ನೂ ಅಭಿವೃದ್ಧಿಯಾಗಿಲ್ಲ. ಈ ಬಾರಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇನೆ.
ವಾರ್ಡ್ ವ್ಯಾಪ್ತಿ: ಜೆ.ಪಿ. ನಗರ ಎ ಬ್ಲಾಕ್, ಮಾನಂದವಾಡಿ ರಸ್ತೆ ವರ್ತುಲ ರಸ್ತೆ.
ಭೂಮಿ ಒತ್ತುವರಿ ಬಗ್ಗೆ ಕ್ರಮ
ನನ್ನ ವಾರ್ಡಿನಲ್ಲಿ ನೀರಿನ ಸಮಸ್ಯೆಯನ್ನು ಶೇ. 75 ರಷ್ಟು ನಿವಾರಿಸಿದ್ದೇನೆ. ಶ್ರೀರಾಂಪುರ 3ನೇ ಹಂತದಲ್ಲಿ ಸ್ವಲ್ಪ ಸಮಸ್ಯೆಯಿದೆ. ಬಿಇಎಂಎಲ್, ಎಲ್‌ಐಸಿ, ಶ್ರೀನಗರದ 1 ರಿಂದ 16ನೇ ತಿರುವಿನ ರಸ್ತೆಗಳಿಗೆ ಡಾಂಬರೀಕರಣ ಆಗಿದೆ. ಜಸ್ಕೋದವರು ನೀರಿನ ಸಂಪರ್ಕ ಕಲ್ಪಿಸಲು ರಸ್ತೆ ಅಗೆದು ಹಾಳು ಮಾಡಿದ್ದಾರೆ. ಐದು ಉದ್ಯಾನಗಳಿದ್ದು, ಅವುಗಳನ್ನು ಅಭಿವೃದ್ಧಿಪಡಿಸುತ್ತೇನೆ. ಚಿಕ್ಕಹರದನಹಳ್ಳಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ವಾಪಸ್ ಮಾಡಿಸುತ್ತೇನೆ.
ವಾರ್ಡ್ ವ್ಯಾಪ್ತಿ: ಬೇಡರ ಕಣ್ಣಪ್ಪ ದೇವಸ್ಥಾನದಿಂದ ಶ್ರೀರಾಂಪುರ 1,2,3ನೇ ಹಂತ, ಚಿಕ್ಕಹರದನಹಳ್ಳಿ, ಬಿಇಎಂಎಲ್‌ನಗರ, ಶ್ರೀನಗರ, ಎಲ್‌ಐಸಿ ನಗರ.
ಮಧುವನ ರಸ್ತೆ ಉನ್ನತೀಕರಣ
ನನ್ನ ವಾರ್ಡಿನಲ್ಲಿ ನೀರಿನ ಸಮಸ್ಯೆ ಇದೆ. ರಸ್ತೆಗಳು ಹಾಳಾಗಿವೆ. ಉದ್ಯಾನಗಳು ಇನ್ನು ಅಭಿವೃದ್ಧಿಯಾಗಬೇಕಿದೆ. ಮಧುವನ, ಎಸ್‌ಬಿಎಂ ಕಾಲೋನಿ ರಸ್ತೆಗಳ ದುರಸ್ತಿಗೆ ಎಂಡಿಎ ಬಜೆಟ್‌ನಲ್ಲಿ 21.9 ಲಕ್ಷ ಹಣ ಮೀಸಲಿರಿಸಿದೆ. ಸದ್ಯದಲ್ಲಿಯೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಮಧುವನ ರಸ್ತೆಯನ್ನು ಉನ್ನತೀಕರಿಸುವುದೇ ಮೊದಲ ಆದ್ಯತೆ.
ವಾರ್ಡ್ ವ್ಯಾಪ್ತಿ: ಮಹದೇಶ್ವರ ದೇವಸ್ಥಾನ, ವಿವೇಕಾನಂದನಗರ, ಮಧುವನ, ಭ್ರಮರಾಂಬ ಕಲ್ಯಾಣ ಮಂಟಪ ಸುತ್ತಮುತ್ತ, ಎಸ್‌ಬಿಎಂ ಕಾಲೋನಿ, ಅರವಿಂದನಗರ.
ಕಸ ವಿಲೇವಾರಿಗೆ ಕ್ರಮ
ವಾರ್ಡಿನಾದ್ಯಂತ ಯುಜಿಡಿ ನಿರ್ವಹಣೆ ಸಮಸ್ಯೆಯಾಗಿದೆ. 808 ಹುಡ್ಕೋ ಮನೆಗಳಿಗೆ ಸರಿಯಾಗಿ ಯುಜಿಡಿ ಕಲ್ಪಿಸಿಲ್ಲ. ಬಡವರು ಯುಜಿಡಿ ಪೈಪ್‌ಲೈನ್ ಉಪಯೋಗ ಪಡೆಯಲು ಕನಿಷ್ಠ 10 ರಿಂದ 15 ಸಾವಿರ ಖರ್ಚು ಮಾಡಬೇಕಿದೆ. ಕಸದ ವಿಲೇವಾರಿ ಆಗಬೇಕಿದೆ. ವೈನ್ ಸ್ಟೋರ್ ಒಂದರಿಂದ ರಾತ್ರಿ 12ರ ನಂತರ ಸ್ಥಳೀಕರಿಗೆ ತೊಂದರೆಯಾಗುತ್ತಿದೆ. ಈ ಅಂಗಡಿಯಲ್ಲಿ ಮದ್ಯಪಾನ ಮಾಡಿದವರು ಬಾಟಲಿಗಳನ್ನು ರಸ್ತೆಯಲ್ಲಿ ಒಡೆದು ಹೋಗುತ್ತಾರೆ ಎಂಬ ದೂರು ಬಂದಿದೆ. ಈ ಬಗ್ಗೆ ಗಮನಹರಿಸುತ್ತೇನೆ.
ವಾರ್ಡ್ ವ್ಯಾಪ್ತಿ: ರಾಮಕೃಷ್ಣನಗರ ಜಿ ಮತ್ತು ಎಚ್ ಬ್ಲಾಕ್, ವಿವೇಕಾನಂದ ಸರ್ಕಲ್ ಸುತ್ತಮುತ್ತ, 808 ಹುಡ್ಕೋ ಮನೆಗಳು, ನಿಮಿಷಾಂಬನಗರ.
-ಜೆ. ಮಹದೇವ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.