ಕಲಾವಿದರ ವರ್ಗಾವಣೆ ವಿರೋಧಿಸಿದ ರಾಜಾರಾಂ ವಜಾ
ಕ.ಪ್ರ. ವಾರ್ತೆ ಮೈಸೂರು ಮಾ.22
ಮೈಸೂರಿನ ಕರ್ನಾಟಕ ನಾಟಕ ರಂಗಾಯಣದ ನಿರ್ದೇಶಕ ಸ್ಥಾನದಿಂದ ಡಾ.ಬಿ.ವಿ. ರಾಜಾರಾಂ ಅವರನ್ನು ಶುಕ್ರವಾರ ರಾಜ್ಯ ಸರ್ಕಾರ ವಜಾಗೊಳಿಸಿದೆ.
ಅವರನ್ನು ಹುದ್ದೆಯಿಂದ ಪದಮುಕ್ತಗೊಳಿಸಿ ಸರ್ಕಾರ ಹೊರಡಿಸಿದ ಆದೇಶಕ್ಕೆ ಸಾಂಸ್ಕೃತಿಕ ವಲಯ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಕಳೆದೆರಡು ದಿನಗಳ ಹಿಂದೆ ರಂಗಾಯಣದ 12 ಕಲಾವಿದರ ವರ್ಗಾವಣೆ ವಿರೋಧಿಸಿ ಕಲಾವಿದರು ನಡೆಸಿದ ಹೋರಾಟಕ್ಕೆ ಡಾ.ಬಿ.ವಿ. ರಾಜಾರಾಂ ಬೆಂಬಲ ವ್ಯಕ್ತಪಡಿಸಿದ್ದರು. ಅಲ್ಲದೇ ರಂಗಾಯಣದ ಒಡಕಿಗೆ ಸರ್ಕಾರ ಮುಂದಾಗಿದೆ ಎಂದು ಆಕ್ಷೇಪಿಸಿದ್ದರು.
ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ರಂಗಾಯಣದ ಉಪನಿರ್ದೇಶಕಿ ನಿರ್ಮಲಾ ಮಠಪತಿ ಅವರು ಕಲಾವಿದರನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು ಸಾಂಸ್ಕೃತಿಕ ವಲಯಕ್ಕೆ ಕೊಡಲಿ ಪೆಟ್ಟು ನೀಡಿದಂತಾಗಿದೆ ಎಂದು ವಿರೋಧ ವ್ಯಕ್ತಪಡಿಸಿದ್ದರು.
ಇದರಿಂದ ಸಿಟ್ಟಿಗೆದ್ದ ಸರ್ಕಾರ ರಂಗಾಯಣ ನಿರ್ದೇಶಕ ರಾಜಾರಾಂ ಅವರನ್ನು ಹುದ್ದೆಯಿಂದ ಪದಮುಕ್ತಿಗೊಳಿಸಿ ಶುಕ್ರವಾರ ಸಂಜೆ 5.49 ರಲ್ಲಿ ಆದೇಶದ ಪ್ರತಿಯನ್ನು ಫ್ಯಾಕ್ಸ್ ಮಾಡಿದೆ. ಅಲ್ಲದೇ ಕಾರಣ ಕೇಳದೆಯೇ ಏಕಾಏಕಿ ತೆಗೆದು ಹಾಕಿದ್ದಕ್ಕೆ ರಂಗಾಯಣ ಕಲಾವಿದರು ಮತ್ತು ತಂತ್ರಜ್ಞರು ಗಾಂಧಿ ಭಾವಚಿತ್ರದೊಂದಿಗೆ ಕಲಾಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಡಿಸಿಗೆ ಮನವಿ ಸಲ್ಲಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.