ಸಿರಪ್ ಕುಡಿದು ಮಗು ಸಾವು: ಪ್ರತಿಭಟನೆ
ಕ.ಪ್ರ. ವಾರ್ತೆ ಹುಣಸೂರು ಮಾ.23
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞರು ಪರೀಕ್ಷಿಸಿ ಸಲಹೆ ನೀಡಿದ್ದ ಸಿರಪ್ ಕುಡಿದ ನಂತರ ಮಗು ಮೃತಪಟ್ಟಿದೆಯೆಂದು ಆಕ್ರೋಶಗೊಂಡ ಮಗುವಿನ ಸಂಬಂಧಿಕರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಪ್ರತಿಭಟಿಸಿದರು.
ಪಟ್ಟಣದ ಒಂಟೆಪಾಳ್ಯ ಬೋರೆಯ ಕೂಲಿಕಾರ್ಮಿಕ ಕಾಂತರಾಜು ಯಶೋಧ ದಂಪತಿ ಪುತ್ರಿ ಚಂದನ (5) ಮೃತಪಟ್ಟವರು. ಮಗುವಿನ ಸಾವಿನಿಂದ ಆಕ್ರೋಶಗೊಂಡ ಕುಟುಂಬದವರು ಹಾಗೂ ಗುಂಪೊಂದು ಮಕ್ಕಳತಜ್ಞ ಡಾ. ಚಂದ್ರಶೇಖರ್ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಆಸ್ಪತ್ರೆಯ ವಿದ್ಯುತ್ ಉಪಕರಣ ಧ್ವಂಸ ಮಾಡಿದ್ದಾರೆ.
ಮಗು ಚಂದನಳಿಗೆ ವಾಂತಿ, ಕೆಮ್ಮು ಇದೆಯೆಂದು ಬೆಳಗ್ಗೆ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಚಂದ್ರಶೇಖರ್ ಅವರಲ್ಲಿ ಚಿಕಿತ್ಸೆ ಪಡೆದಿದ್ದಾರೆ. ವೈದ್ಯರು ಸಿರಪ್ ಬರೆದುಕೊಟ್ಟಿದ್ದಾರೆ. ಔಷಧಿ ಕೊಂಡುಕೊಂಡ ನಂತರ ವೈದ್ಯರಲ್ಲಿ ತೋರಿಸಿ ಮನೆಗೆ ಕರೆದುಕೊಂಡು ಹೋಗಿ ಸಿರಪ್ ನೀಡಿ ಮಲಗಿಸಿದ್ದರು. ಕೆಲಹೊತ್ತಿನ ನಂತರ ನೋಡಿದಾಗ ಮಗು ನೆಲದ ಮೇಲೆ ಒದ್ದಾಡುತ್ತಿತ್ತು. ಆಸ್ಪತ್ರೆಗೆ ಧಾವಿಸಿದರಾದರೂ ಅದಾಗಲೇ ಮಗು ಮೃತಪಟ್ಟಿತ್ತು.
ಇದರಿಂದ ಆಕ್ರೋಶಗೊಂಡ ಮಗುವಿನ ಸಂಬಂಧಿಕರು ಹಾಗೂ ಕೆಲ ಯುವಕರು ಆಸ್ಪತ್ರೆಯ ಮುಂದೆ ಮಗುವಿನ ಶವವನ್ನಿಟ್ಟು ವೈದ್ಯರ ವಿರುದ್ಧ ಘೋಷಣೆ ಕೂಗಿದರು.
ಅಲ್ಲದೆ, ಚಿಕಿತ್ಸೆ ನೀಡಿದ ವೈದ್ಯರ ಕೊಠಡಿಗೆ ತೆರಳಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಹಾಗೂ ಆಸ್ಪತ್ರೆಯ ವಿದ್ಯುತ್ ಉಪಕರಣಗಳನ್ನು ಧ್ವಂಸಗೊಳಸಿದರು.
ಸಂಧಾನ ಯಶಸ್ವಿ: ವಿಷಯ ತಿಳಿದು ಸ್ಥಳಕ್ಕಾಗಮಿಸಿ ಪಟ್ಟಣ ಠಾಣೆ ಎಸ್‌ಐ ಹರಿವರ್ಧನ್ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಪುರಸಭಾ ಸದಸ್ಯ ಎಚ್.ಜೆ. ಯೋಗಾನಂದ್, ಎಚ್.ವೈ. ಮಹದೇವ್, ಲಕ್ಷ್ಮಣ್, ಮಾಜಿ ಅಧ್ಯಕ್ಷ ಎಚ್.ಎನ್. ಚಂದ್ರಶೇಖರ್, ಮುಖಂಡರಾದ ಶ್ರೀನಿವಾಸ್ ಅವರು ಆಡಳಿತಾಧಿಕಾರಿ ಕಚೇರಿಯಲ್ಲಿ ವೈದ್ಯರು ಹಾಗೂ ಮೃತರ ಕಡೆಯವರೊಂದಿಗೆ ಸಂಧಾನ ಮಾಡಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.