ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಆಡಳಿತ ವಿಕೇಂದ್ರೀಕರಣ

Parashurama
Updated On : 25 Mar 2013, 10:46 am

ಮೈಸೂರು: ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ ನಾಲ್ಕು ಕಂದಾಯ ವಿಭಾಗದಲ್ಲಿಯೂ ಉಪ ಪ್ರಧಾನ ವ್ಯವಸ್ಥಾಪಕರ ಕಚೇರಿ ತೆರೆಯುತ್ತಿದೆ. ಆ ಮೂಲಕ ವಿಕೇಂದ್ರೀಕರಣ ವ್ಯವಸ್ಥೆಗೆ ತನ್ನನ್ನು ತಾನು ಒಡ್ಡಿಕೊಳ್ಳುತ್ತಿದೆ.
ಈಗಾಗಲೇ ಮೈಸೂರಿನಲ್ಲಿ ಉಪ ಪ್ರಧಾನ ವ್ಯವಸ್ಥಾಪಕರ ಕಚೇರಿ ತೆರೆದಿರುವ ನಿಗಮವು ಸದ್ಯದಲ್ಲಿಯೇ ಬೆಳಗಾವಿ, ಗುಲ್ಬರ್ಗ ಮತ್ತು ಬೆಂಗಳೂರು ಕಂದಾಯ ವಿಭಾಗದಲ್ಲಿಯೂ ಉಪ ಪ್ರಧಾನ ವ್ಯವಸ್ಥಾಪಕರ ಕಚೇರಿ ತೆರೆಯಲು ತೀರ್ಮಾನಿಸಿದೆ. ಸಮಾಜ ಕಲ್ಯಾಣ ಇಲಾಖೆಯ ಜೊತೆಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಇದುವರೆಗೆ ಕೆಲಸ ಮಾಡುತಿತ್ತು. ಆದರೆ, ಈಗ ಕಂದಾಯ ವಿಭಾಗಗಳಲ್ಲಿ ತನ್ನ ಶಾಖೆ ತೆರೆಯುವ ಮೂಲಕ ತನ್ನ ಕಾರ್ಯವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳುತ್ತಿದೆ. ಏಪ್ರಿಲ್ 1 ರಿಂದ ಈ ಕಚೇರಿ ಅಧಿಕೃತವಾಗಿ ಕಾರ್ಯ ನಿರ್ವಹಿಸುತ್ತವೆ.
ಕಂದಾಯ ವಿಭಾಗ ವ್ಯಾಪ್ತಿಯ ಜಿಲ್ಲೆಗಳ ಫಲಾನುಭವಿಗಳಿಗೆ ಬಹು ಬೇಗನೆ ಸವಲತ್ತು ತಲುಪಿಸಲು ಮತ್ತು ಹೆಚ್ಚು ಮಂದಿಗೆ ಸವಲತ್ತು ತಲುಪುವಂತೆ ಮಾಡಲು ನಿಗಮ ಈ ನಿರ್ಧಾರ ಕೈಗೊಂಡಿದೆ. ಈ ಉಪ ಪ್ರಧಾನ ವ್ಯವಸ್ಥಾಪಕರ ಕಚೇರಿಗೆ ನಾಲ್ಕು ಮಂದಿ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ.
ಈ ತಿಂಗಳ ಅಂತ್ಯದಲ್ಲಿ ನಡೆಯುವ ನಿಗಮದ ಸರ್ವ ಸದಸ್ಯರ ಸಭೆಯಲ್ಲಿ ಕಂದಾಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಉಪ ಪ್ರಧಾನ ವ್ಯವಸ್ಥಾಪಕರಿಗೆ ಹಲವು ಯೋಜನೆಗಳಿಗೆ ಸ್ಥಳೀಯವಾಗಿಯೇ ಅನುಮತಿ ನೀಡುವ ಅಧಿಕಾರ ಮತ್ತು ಹಣಕಾಸು ಅಧಿಕಾರ ನೀಡಲು ನಿಗಮ ಮುಂದಾಗಿದೆ ಎಂದು ನಿಗಮದ ಅಧ್ಯಕ್ಷ ಎ.ಆರ್. ಕೃಷ್ಣಮೂರ್ತಿ ಕನ್ನಡಪ್ರಭಕ್ಕೆ ತಿಳಿಸಿದರು.
ಇದರಿಂದ ಫಲಾನುಭವಿಗಳು ಸಣ್ಣ- ಸಣ್ಣ ಕೆಲಸಗಳಿಗೂ ಬೆಂಗಳೂರಿಗೆ ಅಲೆಯುವುದು ಮತ್ತು ವಿವಿಧ ಯೋಜನೆಗಳ ಅನುಮತಿಗೆ ಬೆಂಗಳೂರಿಗೆ ಕಳುಹಿಸಿರುವುದಾಗಿ ಅಧಿಕಾರಿಗಳು ಸಬೂಬು ಹೇಳುವುದು ತಪ್ಪಿದಂತೆ ಆಗುತ್ತದೆ. ಗಂಗಾ- ಕಲ್ಯಾಣ ಯೋಜನೆ, ಭೂ ಒಡೆತನ ಯೋಜನೆ, ಸ್ವಯಂ ಉದ್ಯೋಗ ಯೋಜನೆ, ಮೈಕ್ರೋ ಫೈನಾನ್ಸ್ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ ಸೇರಿದಂತೆ ಅನೇಕ ಯೋಜನೆಗಳಿಗೆ ಉಪ ಪ್ರಧಾನ ವ್ಯವಸ್ಥಾಪಕರೆ ಅನುಮತಿ ನೀಡುವ ಅಧಿಕಾರ ಲಭ್ಯವಾಗುತ್ತದೆ. ಈ ಮುಂಚೆ ಈ ಎಲ್ಲಾ ಯೋಜನೆಗಳ ಫಲಾನುಭವಿಗಳು ತಾಲೂಕು ಅಭಿವೃದ್ಧಿ ಅಧಿಕಾರಿಯಿಂದ ಜಿಲ್ಲಾ ಅಧಿಕಾರಿ ಮತ್ತು ಅವರಿಂದ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕರಿಗೆ ಕಳುಹಿಸಿ ಅನುಮತಿ ಪಡೆಯಬೇಕಿತ್ತು. ಆದರೆ, ಮುಂದಿನ ದಿನಗಳಲ್ಲಿ ಅಂತಹ ಸಮಸ್ಯೆ ಇರುವುದಿಲ್ಲ.
ನಿಗಮದಲ್ಲಿ ಖಾಲಿ ಇರುವ ಸುಮಾರು 167 ವಿವಿಧ ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಲಾಗಿದೆ. ಈ ಪೈಕಿ 97 ಹುದ್ದೆಗಳನ್ನು ಕೆಪಿಎಸ್‌ಸಿ ಮೂಲಕ ಭರ್ತಿ ಮಾಡಲಾಗುತ್ತಿದೆ. ಉಳಿಕೆ ಹುದ್ದೆಗಳನ್ನು ಸದ್ಯದಲ್ಲಿಯೇ ತುಂಬಲು ತೀರ್ಮಾನಿಸಲಾಗಿದೆ. ಅಲ್ಲದೆ, ನಿಗಮದ ನೌಕರರ ಬಡ್ತಿಗೂ ಅನೇಕ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಇತರೆ ಇಲಾಖೆಯಿಂದ ನಿಯುಕ್ತರಾದವರಿಗೆ ಶೇ. 50ರಷ್ಟು ಬಡ್ತಿ ಮೀಸಲಾತಿ ಮತ್ತು ನಿಗಮದ ನೌಕರರಿಗೆ ಶೇ. 50ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.
ನಿಗಮದ ತಾಲೂಕು ಅಭಿವೃದ್ಧಿ ಅಧಿಕಾರಿಯ ಹುದ್ದೆಯನ್ನು ಗ್ರೇಡ್- 2ಕ್ಕೆ ಏರಿಸಲಾಗಿದೆ. ಹೀಗೆ ಹಲವು ಪ್ರಮುಖ ನಿರ್ಧಾರ ಕೈಗೊಂಡಿರುವ ನಿಗಮ ಜನಸಾಮಾನ್ಯರ ಬಳಿಗೆ ಹೋಗಲು ನಿರ್ಧರಿಸಿದೆ. 1975ರಲ್ಲಿ ಸ್ಥಾಪನೆಯಾದ ನಿಗಮ 38 ವರ್ಷಗಳ ಬಳಿಕ ವಿಕೇಂದ್ರೀಕರಣಗೊಳ್ಳುತ್ತಿದೆ.
ಡಿ.ಎನ್. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments