ಏ. 2ರಂದು ಮತದಾನ ಜಾಗೃತಿ ಜಾಥಾ
ಕ.ಪ್ರ.ವಾರ್ತೆ ಮೈಸೂರು ಮಾ.25
ರಾಜ್ಯ ವಿಧಾನಸಭಾ ಚುನಾವಣೆ- 2013ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ ಹೆಸರು ನೋಂದಣಿ ಹಾಗೂ ಮತದಾನದ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸಲು ಮತದಾರರ ಶಿಕ್ಷಣ ಮತ್ತು ಜಾಗೃತಿಯ ಜಿಲ್ಲಾ ಸಮಿತಿಯಿಂದ ಏ. 2ರಂದು ಜಾಗೃತಿ ಜಾಥಾ ಆಯೋಜಿಸಲಾಗಿದೆ.
ಅಂದು ಸಂಜೆ 5 ರಿಂದ 6 ಗಂಟೆಯವರೆಗೆ ನಗರದಲ್ಲಿ ಬೃಹತ್ ಜಾಥಾ ಆಯೋಜಿಸಲು ಜಿಪಂ ಸಿಇಒ ಡಾ. ಅಜಯ್ ನಾಗಭೂಷಣ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಮಿತಿಯ ಪ್ರಪ್ರಥಮ ಸಭೆಯು ಸರ್ವಾನುಮತದಿಂದ ತೀರ್ಮಾನಿಸಿತು.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕೆ.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಯುವ ಈ ಜಾಥಾದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 300, ಯುವಜನ ಮತ್ತು ಕ್ರೀಡಾ ಇಲಾಖೆಯ 200, ಆರೋಗ್ಯ ಇಲಾಖೆಯ 300, ಶಿಕ್ಷಣ ಇಲಾಖೆಯ 300, ಹಿಂದುಳಿದ ವರ್ಗಗಳ ಇಲಾಖೆಯ 200 ನೆಹರು ಯುವ ಕೇಂದ್ರದ 200 ಹಾಗೂ ವಿವಿಧ ಇಲಾಖೆಯ 100 ಮಂದಿ ಸಿಬ್ಬಂದಿ ಭಾಗವಹಿಸಿ ಮತದಾರರ ಪಟ್ಟಿಗೆ ಹೆಸರು ನೋಂದಣಿ ಹಾಗೂ ಮತದಾನದ ಹಕ್ಕಿನ ಜಾಗೃತಿಯ ವಿವಿಧ ಘೋಷಣಾ ವಾಕ್ಯಗಳ ಫಲಕ, ಬ್ಯಾನರ್ ಹಿಡಿದು ಕರಪತ್ರ ವಿತರಿಸುವರು.ಸಮಿತಿಯ ಎಲ್ಲಾ ಸದಸ್ಯರು ಸ್ವೀಪ್ ಕ್ರಿಯಾಯೋಜನೆ ಅನ್ವಯ ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು. ಮತದಾರರ ಪಟ್ಟಿಗೆ ಹೆಸರು ನೋಂದಣಿ ಮತ್ತು ಮತದಾನದ ಹಕ್ಕಿನ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿ ಜಾಗೃತಿ ಮೂಡಿಸಬೇಕು. ಮತದಾನದ ಹಕ್ಕಿನ ಅತ್ಯುತ್ತಮ ಘೋಷಣಾ ವಾಕ್ಯಗಳ ಸ್ಪರ್ಧೆಯನ್ನು ಎಫ್ಎಂ ರೇಡಿಯೋ ಮೂಲಕ ಆಯೋಜಿಸಿ ಮೊದಲ 3 ಉತ್ತಮ ಘೋಷಣಾ ವಾಕ್ಯ ಸಲ್ಲಿಸುವವರಿಗೆ ಬಹುಮಾನ ನೀಡಲು ಸಭೆ ತೀರ್ಮಾನಿಸಿತು.
ಜಿಪಂ ಮುಖ್ಯ ಯೋಜನಾಧಿಕಾರಿ ವಸುಂಧರಾದೇವಿ, ವಾರ್ತಾ ಇಲಾಖೆ ಉಪ ನಿರ್ದೇಶಕ ಹಾಗೂ ಸಮಿತಿ ನೋಡಲ್ ಅಧಿಕಾರಿ ಎ.ಆರ್. ಪ್ರಕಾಶ್ ಸಮಿತಿಯ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.