ಗೆಲವಿನ ಸಿದ್ಧತೆಗೆ ಸ್ವಾಮಿ ಸವಾಲ್
ಮೈಸೂರು: ಮೈಸೂರು, ನಂಜನಗೂಡು ಹಾಗೂ ತಿರುಮಕೂಡಲು ನರಸೀಪುರ ತಾಲೂಕುಗಳ ಹಲವು ಪ್ರದೇಶಗಳ ತ್ರಿವೇಣಿ ಸಂಗಮವೇ ವರುಣ ಕ್ಷೇತ್ರ. ಕುಲದೀಪ್ಸಿಂಗ್ ನೇತೃತ್ವದ ಕ್ಷೇತ್ರ ಪುನರ್ ವಿಂಗಡಣಾ ವರದಿಯಂತೆ 2008ರಲ್ಲಿ ಅಸ್ತಿತ್ವಕ್ಕೆ ಬಂದ ಕ್ಷೇತ್ರವಿದು. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸ್ಪರ್ಧೆಯಿಂದಾಗಿ ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಇದೂ ಒಂದು.
ಈ ಹಿಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿದ್ದ ವರುಣ ಹೋಬಳಿ, ಟಿ. ನರಸೀಪುರ ಮೀಸಲು ಕ್ಷೇತ್ರ ವ್ಯಾಪ್ತಿಯಲ್ಲಿದ್ದ ನಂಜನಗೂಡು ತಾಲೂಕು ಬಿಳಿಗೆರೆ ಹಾಗೂ ಚಿಕ್ಕಯ್ಯನಛತ್ರ ಹೋಬಳಿ, ಟಿ. ನರಸೀಪುರ ತಾ. ಕಸಬಾ ಹೋಬಳಿ, ಕಳೆದ ಚುನಾವಣೆ ಕಾಲಕ್ಕೆ ರದ್ದಾದ ಸಂತೇಮರಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಕವಲಂದೆ ಹೋಬಳಿಯ ಭಾಗಶಃ ಪ್ರದೇಶಗಳು ಈ ಕ್ಷೇತ್ರ ವ್ಯಾಪ್ತಿಗೆ ಸೇರಿವೆ.
ಸಿದ್ದರಾಮಯ್ಯ ಅವರು 1983ರಿಂದ 2006 ರವರೆಗೆ ಚಾಮುಂಡೇಶ್ವರಿ ಕ್ಷೇತ್ರದ ಕಾಯಂ ಅಭ್ಯರ್ಥಿ ಎನಿಸಿಕೊಂಡಿದ್ದರು. 1983ರಲ್ಲಿ ಲೋಕದಳ, 1985ರಲ್ಲಿ ಜನತಾಪಕ್ಷ. 1994 ರಲ್ಲಿ ಜನತಾದಳ, 2004 ರಲ್ಲಿ ಜೆಡಿಎಸ್, 2006ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದರು. 1989ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಕಾಂಗ್ರೆಸ್ನ ಎಂ. ರಾಜಶೇಖರಮೂರ್ತಿ, 1999ರಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ, ಕಾಂಗ್ರೆಸ್ನ ಎ.ಎಸ್. ಗುರುಸ್ವಾಮಿ ಅವರ ಎದುರು ಪರಾಭವಗೊಂಡಿದ್ದರು.
ಪ್ರಾಬಲ್ಯ: ಸಿದ್ದರಾಮಯ್ಯ ಅವರ ಹುಟ್ಟೂರು ಸಿದ್ದರಾಮನಹುಂಡಿ ಕೂಡ ವರುಣ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗರು ಹಾಗೂ ವೀರಶೈವರ ಪ್ರಾಬಲ್ಯ.
ಸಿದ್ದರಾಮಯ್ಯ ಅವರು ಜೆಡಿಎಸ್ ತ್ಯಜಿಸಿ, ಕಾಂಗ್ರೆಸ್ ಸೇರಿದ ನಂತರ 2006ರ ಡಿಸೆಂಬರ್ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ನ ಶಿವಬಸಪ್ಪ ಅವರ ಎದುರು ಕೇವಲ 257 ಮತಗಳ ಅಂತರದಿಂದ ತ್ರಾಸದಾಯಕ ಗೆಲವು ಸಾಧಿಸಿದ್ದರು. ಈ ಕಹಿ ಅನುಭವದಿಂದ ಅವರು ಚಾಮುಂಡೇಶ್ವರಿ ತ್ಯಜಿಸಿ, ವರುಣದತ್ತ ಹೆಜ್ಜೆ ಹಾಕಿದರು.
6 ಬಾರಿ ಆಯ್ಕೆ: ವರುಣ ಕ್ಷೇತ್ರದಲ್ಲಿ ವೀರಶೈವರ ಪ್ರಾಬಲ್ಯವಿದ್ದರೂ ಅಷ್ಟೇ ಪ್ರಮಾಣದಲ್ಲಿ ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತರು ಇದ್ದಾರೆ. ಇದೇ ಕಾರಣಕ್ಕಾಗಿ ಸಿದ್ದರಾಮಯ್ಯ ಅವರು ಒಂದು ಉಪ ಚುನಾವಣೆಯಲ್ಲಿ ಸೇರಿದಂತೆ 5 ಬಾರಿ ಗೆದ್ದಿದ್ದ ಚಾಮುಂಡೇಶ್ವರಿ ಕ್ಷೇತ್ರ ತ್ಯಜಿಸಿ, 2008ರಲ್ಲಿ ವರುಣದಿಂದ ಸ್ಪರ್ಧಿಸಿ, 6ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದರು. ಇದೀಗ ಅವರು ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ.
ವರುಣದಿಂದಲೇ ಸ್ಪರ್ಧೆ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಇನ್ನೂ ಕೆಜೆಪಿಗೆ ಹೋಗಿರಲಿಲ್ಲ. ಆಗಲೇ ಬಿಜೆಪಿಯಿಂದ ಯಡಿಯೂರಪ್ಪ ಅವರ ಆಪ್ತ ಸಹಾಯಕ ಕಾ.ಪು. ಸಿದ್ದಲಿಂಗಸ್ವಾಮಿ ಅಭ್ಯರ್ಥಿ ಎಂದು ನಿರ್ಧಾರವಾಗಿತ್ತು. ಹೀಗಾಗಿ ಸಿದ್ದರಾಮಯ್ಯ ಅವರು ವರುಣ ಬಿಟ್ಟು ಮತ್ತೆ ಹಳೆಯ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗುವ ಆಲೋಚನೆಯಲ್ಲಿದ್ದರು.
ಯಾವಾಗ ಯಡಿಯೂರಪ್ಪ ಅವರು ಬಿಜೆಪಿಯಿಂದ ಹೊರ ನಡೆದರೋ ಸಿದ್ದರಾಮಯ್ಯ ಮತ್ತೆ ವರುಣದಿಂದಲೇ ಸ್ಪರ್ಧಿಸುವ ತೀರ್ಮಾನಕ್ಕೆ ಬಂದಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.