'ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ವ್ಯವಸ್ಥೆ ಉತ್ತಮಪಡಿಸಿ'
ಕ.ಪ್ರ.ವಾರ್ತೆ ಮೈಸೂರು ಮಾ.25
ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ವ್ಯವಸ್ಥೆಯನ್ನು ಉತ್ತಮಪಡಿಸುವ ತಂತ್ರಜ್ಞಾನ ಬಳಸಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಜೆಎಸ್‌ಎಸ್ ವಿವಿ ಕುಲಪತಿ ಡಾ.ಬಿ. ಸುರೇಶ್ ಸಲಹೆ ನೀಡಿದರು.
ಮಾನಸಗಂಗೋತ್ರಿಯ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ಇನ್ಸ್‌ಟ್ರುಮೆಂಟೇಷನ್ ಟೆಕ್ನಾಲಜಿ ವಿಭಾಗವು ಫಿಲಿಪ್ಸ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಲಿ. ಸಹಯೋಗದೊಂದಿಗೆ ಏರ್ಪಡಿಸಿದ್ದ ವೈದ್ಯಕೀಯ ಕ್ಷೇತ್ರದಲ್ಲಿನ ಸವಾಲುಗಳು ಕುರಿತ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶವು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಗ್ರಾಮೀಣ ಪ್ರದೇಶದ ವೈದ್ಯಕೀಯ ಸವಲತ್ತುಗಳ ಪೂರೈಕೆಯ ಕೊರತೆಯೂ ಒಂದಾಗಿದೆ. ಪ್ರಸ್ತುತ ಜೀವನ ಶೈಲಿಯಿಂದಾಗಿ ಬರುವ ರೋಗಗಳು ಪ್ರಪಂಚದ ಮುಖ್ಯ ಸಮಸ್ಯೆಗಳಲ್ಲಿ ಒಂದು. ಈ ರೋಗಗಳನ್ನು ಮೊದಲ ಹಂತದಲ್ಲಿಯೇ ಪತ್ತೆ ಹಚ್ಚುವುದು ಮತ್ತು ಚಿಕಿತ್ಸೆ ನೀಡುವುದು ನಮ್ಮ ಮುಂದಿರುವ ಸವಾಲಾಗಿದೆ. ಆದರೆ, ಭಾರತೀಯ ಜೀವ ವಿಮೆಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದರು.
ಔಷಧಗಳ ದಾಸ್ತಾನುಗೊಳಿಸುವಿಕೆಯನ್ನು ಕೋಲ್ಡ್ ಚೈನ್ ಟೆಕ್ನಾಲಜಿಯ ಮೂಲಕ ಸೌರಶಕ್ತಿ ಉಪಯೋಗಿಸಿ ಮಾಡಬಹುದು. ಇಂತಹ ತಂತ್ರಜ್ಞಾನ ಒಳಗೊಂಡ ವೈದ್ಯಕೀಯ ಸವಲತ್ತುಗಳ ಬಗ್ಗೆ ಹಾಗೂ ತಂತ್ರಜ್ಞಾನದ ಅರಿವು ಮೂಡುವಂತೆ ವೈದ್ಯಾಧಿಕಾರಿಗಳಿಗೆ ತರಬೇತಿ ನೀಡಿದಾಗ ಮಾತ್ರ ಇಂತಹ ಸವಲತ್ತುಗಳು ಸಾರ್ಥಕವೆನಿಸುತ್ತವೆ ಎಂದು ಅವರು ತಿಳಿಸಿದರು.
ಎಸ್‌ಜೆಸಿಇ ಪ್ರಾಂಶುಪಾಲ ಡಾ.ಬಿ.ಜಿ. ಸಂಗಮೇಶ್ವರ ಅಧ್ಯಕ್ಷತೆ ವಹಿಸಿದ್ದರು. ಫಿಲಿಪ್ಸ್ ರಿಸರ್ಚ್ ಎಷಿಯಾ ಸಂಸ್ಥೆಯ ಹಿರಿಯ ನಿರ್ದೇಶಕ ಡಾ.ಜೆ.ಎ.ಎಂ.ಎಂ. ವ್ಯಾನ್ ಹ್ಯಾರೆನ್, ಇನ್ಸ್‌ಟ್ರುಮೆಂಟೇಷನ್ ಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಡಾ.ವಿ. ಉದಯಶಂಕರ್ ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.