ನ್ಯಾಕ್ ಮಾನ್ಯತೆಗೆ 44 ಕಾಲೇಜು
ಮೈಸೂರು: ರಾಜ್ಯದ 44 ಸರ್ಕಾರಿ ಕಾಲೇಜುಗಳು ಹೊಸದಾಗಿ ನ್ಯಾಕ್ (ರಾಷ್ಟ್ರೀಯ ಪರೀಕ್ಷೆ ಮತ್ತು ಮಾನ್ಯತಾ ಸಂಸ್ಥೆ) ಮೌಲ್ಯಮಾಪನಕ್ಕೆ ಒಳಪಡಲು ಸಿದ್ಧವಾಗುತ್ತಿವೆ.
40 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, 2 ಸರ್ಕಾರಿ ಗೃಹ ವಿಜ್ಞಾನ ಮಹಿಳಾ ಕಾಲೇಜು ಹಾಗೂ 2 ಸರ್ಕಾರಿ ಕಾನೂನು ಕಾಲೇಜುಗಳು ನ್ಯಾಕ್ ಮಾನ್ಯತೆ ಪಡೆಯಲು ಸಿದ್ಧಗೊಳ್ಳುತ್ತಿವೆ.
ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ 2006- 07ರ ನಂತರ ಆರಂಭಗೊಂಡು 5 ವರ್ಷ ಪೂರೈಸಿದ 44 ಸರ್ಕಾರಿ ಕಾಲೇಜುಗಳು ನ್ಯಾಕ್ ಮೌಲ್ಯಮಾಪನಕ್ಕೆ ಒಳಪಡುವುದು ಕಡ್ಡಾಯ. ಈ ನ್ಯಾಕ್ ಮೌಲ್ಯಮಾಪನ ಪ್ರಕ್ರಿಯೆಗೆ ಒಳಪಡಲು ಅಗತ್ಯವಿರುವ ಎಲ್ಲಾ ಮಾನದಂಡಗಳನ್ನು ಈ ಕಾಲೇಜುಗಳು ಹೊಂದಿವೆ.
ಈ 44 ಸರ್ಕಾರಿ ಕಾಲೇಜುಗಳು ನ್ಯಾಕ್ ಮೌಲ್ಯಮಾಪನ ಪ್ರಕ್ರಿಯೆಗೆ ಒಳಪಡಲು, ಮೌಲ್ಯಮಾಪನ ಪೂರ್ವ ಸಿದ್ಧತೆಗಾಗಿ 2012- 13ನೇ ಸಾಲಿನ ಮುಂದುವರಿಕೆ ಕಾರ್ಯಕ್ರಮ ರಾಷ್ಟ್ರೀಯ ಅಂಗಿಕೃತ ಪರಿಷತ್ತು ಅಡಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯು ಅನುದಾನ ಬಿಡುಗಡೆ ಮಾಡಿದೆ. 44 ಕಾಲೇಜುಗಳಿಗೆ ತಲಾ 1.20 ಲಕ್ಷನಂತೆ ಒಟ್ಟು 52.80 ಲಕ್ಷ ಅನುದಾನ ನೀಡಿದೆ.
ವೆಬ್ಸೈಟ್ ನಿರ್ಮಿಸಬೇಕು: ವೆಬ್ಸೈಟ್ ನಿರ್ಮಾಣಕ್ಕಾಗಿ 10 ಸಾವಿರ, ಸ್ವಯಂ ಮೌಲ್ಯಮಾಪನ ವರದಿ ತಯಾರಿಸಲು 35 ಸಾವಿರ ಹಾಗೂ ಮೌಲ್ಯಮಾಪನ ಶುಲ್ಕ ಪಾವತಿಸಲು 75 ಸಾವಿರ ಸೇರಿ ಒಟ್ಟು 1.20 ಲಕ್ಷವನ್ನು ಪ್ರತಿ ಕಾಲೇಜುಗಳಿಗೆ ನೀಡಲಾಗಿದೆ. ನ್ಯಾಕ್ ಮೌಲ್ಯಮಾಪನ ಪ್ರಕ್ರಿಯೆಯ ಪೂರ್ವ ಸಿದ್ಧತೆಗಾಗಿ ಮಾತ್ರ ಈ ಅನುದಾನ ಬಳಸಿಕೊಳ್ಳಲು ಸಂಬಂಧಿಸಿದ ಕಾಲೇಜುಗಳ ಪ್ರಾಂಶುಪಾಲರಿಗೆ ಅನುಮತಿ ನೀಡಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಡಾ.ಎನ್.ಎಸ್. ಚನ್ನಪ್ಪಗೌಡ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಬಿ. ಶೇಖರ್ ಗೋಪಿನಾಥಂ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.