ಮಕ್ಕಳಿಗೆ ಶಿಕ್ಷಣ ನೀಡಿದರೆ ಅಭಿವೃದ್ಧಿ
ಕನ್ನಡಪ್ರಭ ವಾರ್ತೆ ಹುಣಸೂರು ಮಾ.25
ಮಕ್ಕಳಿಗೆ ಶಿಕ್ಷಣವನ್ನು ಕಡ್ಡಾಯವಾಗಿ ನೀಡಬೇಕೆನ್ನುವ ಅರಿವು ಗ್ರಾಮೀಣ ಮಹಿಳೆಯರಲ್ಲಿ ಮೂಡಿದಲ್ಲಿ ಮಾತ್ರ ಕುಟುಂಬ ಮತ್ತು ಗ್ರಾಮದ ಸಮಗ್ರ ಅಭಿವೃದ್ಧಿ ಸಾಧ್ಯವೆಂದು ತಾಲೂಕಿನ ತಟ್ಟೆಕೆರೆ ಗ್ರಾಮದ ಮಾರುತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಲಕ್ಷ್ಮೀಕಾಂತ್ ಅಭಿಪ್ರಾಯಪಟ್ಟರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ ತಾಲೂಕಿನ ಹನಗೋಡು ವಲಯದ ತಟ್ಟೆಕೆರೆ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಿರುವ ಹೇಮಾವತಿ ಮಹಿಳಾ ಜ್ಞಾನವಿಕಾಸ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಗ್ರಾಮದ ಮಹಿಳೆಯರಲ್ಲಿ ಆರೋಗ್ಯ ಸಂರಕ್ಷಣೆ, ಪರಿಸರ ರಕ್ಷಣೆ, ಶಿಕ್ಷಣದ ಮಹತ್ವ, ವೈಯಕ್ತಿಕ ಶುಚಿತ್ವದಂತಹ ಹಲವಾರು ವಿಷಯಗಳ ಕುರಿತು ಮಾಹಿತಿ ಮತ್ತು ತರಬೇತಿ ಕಾರ್ಯಾಗಾರ ನೀಡುತ್ತಿದೆ. ಮನೆಯಲ್ಲಿ ಮಹಿಳೆ ಕಲಿತ ಹೆಣ್ಣಾಗಿದ್ದರೆ, ಆ ಕುಟುಂಬದ ಎಲ್ಲ ಸದಸ್ಯರು ಕಲಿಕೆಯ ಹಾದಿಯಲ್ಲಿ ನಡೆಯುತ್ತಾರೆ. ಈ ನಿಟ್ಟಿನಲ್ಲಿ ಗ್ರಾಮೀಣ ಮಹಿಳೆಯರು ತಾವು ಶಿಕ್ಷಿತರಾಗುವುದಲ್ಲದೆ, ತಮ್ಮ ಮಕ್ಕಳಿಗೂ ಶಿಕ್ಷಣ ನೀಡುವ ಗುರಿ ಹೊಂದಬೇಕು ಎಂದು ತಿಳಿಸಿದರು. ತಟ್ಟೆಕೆರೆ ಗ್ರಾಮದ ಮುಖಂಡ ಶಿವಣ್ಣ ಮಾತನಾಡಿದರು. ತಾಲೂಕು ಯೋಜನಾಧಿಕಾರಿ ಚನ್ನಪ್ಪಗೌಡರು ಜ್ಞಾನವಿಕಾಸ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಗ್ರಾಮದ ಮುಖಂಡ ಸಣ್ಣರಾಮಯ್ಯ, ಹಾಲು ಒಕ್ಕೂಟದ ಅಧ್ಯಕ್ಷೆ ಲತಾ, ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸಾಕಮ್ಮ, ಶಿಕ್ಷಕರಾದ ಶಂಕರಪ್ಪ, ತಿಪ್ಪಣ್ಣ, ವಲಯ ಮೇಲ್ವಿಚಾರಕ ರಾಘವೇಂದ್ರ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶಿಲ್ಪಾ, ಸೇವಾ ಪ್ರತಿನಿಧಿ ಅನಿತಾ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.