ಸ್ಫೂರ್ತಿ ಕೇಂದ್ರಕ್ಕೆ ಸಾಹಿತಿಗಳ ಆಗ್ರಹ
ಮೈಸೂರು: ನೂರು ವರ್ಷಗಳಷ್ಟು ಇತಿಹಾಸವುಳ್ಳ ಕನ್ನಡ ಶಾಲೆಯನ್ನು ಕೆಡವಿ, ಆ ಜಾಗದಲ್ಲಿ ವಿವೇಕಾನಂದರ ಹೆಸರಿನಲ್ಲಿ ಸ್ಫೂರ್ತಿ ಕೇಂದ್ರ ತೆರೆಯಬೇಡಿ ಎಂದು ಸಾಹಿತಿಗಳು ಆಗ್ರಹಿಸಿದ್ದಾರೆ. ಯಾವುದೇ ಮಗುವಿನ ವಿಕಾಸದ ಸೋಪಾನಕ್ಕೆ ಪ್ರಾಥಮಿಕ ಶಿಕ್ಷಣವೇ ಬುನಾದಿ. ಅದನ್ನು ಅಲುಗಾಡಿಸಿ, ಬೆಳೆದ ಮಕ್ಕಳಿಗೆ ಅದರ ಮೇಲೆ ಸ್ಫೂರ್ತಿ ಕೇಂದ್ರ ನಿರ್ಮಿಸುವ ಆಲೋಚನೆಯನ್ನು ಕೈ ಬಿಡಬೇಕು ಎಂದು ಸಾಹಿತಿಗಳಾದ ಪ್ರೊ. ಅರವಿಂದ ಮಾಲಗತ್ತಿ, ಸಿ.ಎಸ್. ರಾಮಚಂದ್ರ, ಎನ್.ಎಂ. ತಳವಾರ್, ಪ್ರೀತಿ ಶುಭಚಂದ್ರ, ಡಾ.ಸಿ.ಪಿ. ಸಿದ್ದಾಶ್ರಮ ಅವರು ಸರ್ಕಾರ ಹಾಗೂ ಶ್ರೀರಾಮಕೃಷ್ಣ ಮಠವನ್ನು ಕೋರಿದ್ದಾರೆ. ಸ್ಫೂರ್ತಿ ಕೇಂದ್ರವನ್ನು ಅದೇ ಜಾಗದಲ್ಲಿಯೇ ನಿರ್ಮಿಸಬೇಕಾಗಿಲ್ಲ. ಈಗಿರುವ ಸ್ಮಾರಕ ಉಳಿಸಿ ಬೆಳೆಸಲು ಯಾರದೇ ವಿರೋಧವಿಲ್ಲ. ಆದ್ದರಿಂದ ಈ ವಿಷಯವನ್ನು ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸದೆ, ಕನ್ನಡ ಶಾಲೆ ಉಳಿಸುವತ್ತ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಪಡಿತರದಲ್ಲಿ ಅಕ್ರಮ: ದೂರು
ಮೈಸೂರು: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ (ಕೆಎಫ್‌ಸಿಎಸ್‌ಸಿ) ಮೈಸೂರು ಜಿಲ್ಲಾ ಕಚೇರಿಯ ಹಿರಿಯ ಸಹಾಯಕರೊಬ್ಬರು ಪಡಿತರ ಆಹಾರ ದುರುಪಯೋಗಪಡಿಸಿಕೊಂಡಿರುವ ಬಗ್ಗೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಶ್ವೇಶ್ವರನಗರ ಇಂಡಸ್ಟ್ರೀಯಲ್ ಸಬರ್ಬ್‌ನಲ್ಲಿರುವ ಕೆಎಫ್‌ಸಿಎಸ್‌ಸಿ ಜಿಲ್ಲಾ ಕಚೇರಿಯ ಹಿರಿಯ ಸಹಾಯಕ ಎಚ್. ಜಯರಾಮ್ ಎಂಬವರೆ ಈ ಆರೋಪ ಹೊತ್ತಿರುವವರು. ಕೆಎಫ್‌ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕ ಜಯದೇವರಾಜ ಅರಸು ಅವರು ಡಿಪೋದಲ್ಲಿದ್ದ ಪಡಿತರ ಪರಿಶೀಲಿಸಿದಾಗ, ದುರುಪಯೋಗ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. 4061 ಕ್ವಿಂಟಲ್ ಅಕ್ಕಿ, 6440 ಕ್ವಿಂಟಲ್ ಗೋದಿ ಹಾಗೂ 59 ಕ್ವಿಂಟಲ್ ಸಕ್ಕರೆ ದುರುಪಯೋಗ ಆಗಿದೆ ಎಂದು ಜಯದೇವರಾಜ ಅರಸು ಅವರು ವಿದ್ಯಾರಣ್ಯಪುರಂ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ವಿದ್ಯಾರಣ್ಯಪುರಂ ಠಾಣೆ ಇನ್ಸ್‌ಪೆಕ್ಟರ್ ಹರೀಶ್‌ಕುಮಾರ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಟೈರ್ ಕಳವು: ಇಬ್ಬರ ಬಂಧನ
ಮೈಸೂರು: ಫ್ಯಾಕ್ಟರಿಯಲ್ಲಿ ಟೈರ್ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಮೂಲದ ರಾಘವೇಂದ್ರ (22) ಮತ್ತು ವಿರಾಜಪೇಟೆ ನಿವಾಸಿ ಹರೀಶ್ (30) ಬಂಧಿತರು. ಈ ಇಬ್ಬರು ಕೃಷ್ಣ ರಿಬೆಲ್ಟ್ ಟೈರ್ ಫ್ಯಾಕ್ಟರಿಯಲ್ಲಿ 10 ಸಾವಿರ ಮೌಲ್ಯದ ಟೈರ್ ಕಳವು ಮಾಡಿ, ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಬಂಧಿತರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವಿದ್ಯಾರಣ್ಯಪುರಂ ಠಾಣೆ ಎಸ್‌ಐ ಶಿವಣ್ಣ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಗಾಯಾಳು ಪಾದಚಾರಿ ಸಾವು
ಮೈಸೂರು: ಆಟೋ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಪಾದಚಾರಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಜನತಾನಗರ ನಿವಾಸಿ ಮಹದೇವಪ್ಪ (70) ಮೃತಟ್ಟವರು. ಇವರು ಫೆ. 14 ರಂದು ಸಾಹುಕಾರ ಚೆನ್ನಯ್ಯ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಆಟೋ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದರು. ಈ ಸಂಬಂಧ ಕುವೆಂಪುನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಜೂಜಾಟ: ಬಂಧನ
ಜೂಜಾಡುತ್ತಿದ್ದ 6 ಮಂದಿಯನ್ನು ಇಲವಾಲ ಠಾಣೆ ಪೊಲೀಸರು ಬಂಧಿಸಿ, 10,490 ವಶಪಡಿಸಿಕೊಡಿರುವ ಘಟನೆ ಭಾನುವಾರ ನಡೆದಿದೆ. ಇಲವಾಲ ಬಳಿಯ ಮೈರಾ ಕಾಲೇಜಿನ ಬಳಿ ಜೂಜಾಡುತ್ತಿದ್ದ ಈ 6 ಮಂದಿಯನ್ನು ಇಲವಾಲ ಠಾಣೆ ಎಸ್‌ಐ ಜೀವನ್ ಮತ್ತು ಸಿಬ್ಬಂದಿ ಬಂಧಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.