ಬಣ್ಣದ ನಂಟಿನ ಮಾಸದ ಬದುಕು...
ಮೈಸೂರು: ನಗಿಸುವುದು ನನ್ನ ಧರ್ಮ ನಗುವುದು ನಿಮ್ಮ ಕರ್ಮ ಎಂಬ ಮಾತಿನಂತೆ ಜೀವನದ ಉದ್ದಕ್ಕೂ ನೋವುಂಡರೂ ರಂಗದ ಮೇಲೆ ನಗಿಸುತ್ತಲೇ ಅಭಿನಯಿಸುತ್ತಿರುವ ಹಾಸ್ಯನಟ ಎಂ. ನಾಗರಾಜ್ ಅವರಿಗೆ ಬದುಕೇ ನಾಟಕ ರಂಗ. ಅದುವೇ ಉಸಿರು.
ಕನ್ನಡದ ಜನಪ್ರಿಯ ನಟ ಡಿಕ್ಕಿ ಮಾಧವರಾವ್ ಅವರ ಸಹೋದರ ಎಂ. ರಾಘವೇಂದ್ರರಾವ್ ಹಾಗೂ ರಮಾಬಾಯಿ ಅವರ ಪುತ್ರ ನಾಗರಾಜ್ ಅವರಿಗೆ ಇದೀಗ 73ರ ವಯೋವಾನ. ತನ್ನ 9ನೇ ವಯಸ್ಸಿನಲ್ಲಿ ರಂಗ ಪ್ರವೇಶಿಸಿದ ಇವರು ಮುಂದೆ ಯಾವುದೇ ಬದುಕನ್ನು ಆರಿಸಿಕೊಳ್ಳದೆ ನಟನಾಗುವ ಹಂಬಲದಿಂದ ರಂಗಭೂಮಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು.
ಚಾಮುಂಡೇಶ್ವರಿ ಕರ್ನಾಟಕ ನಾಟಕ ಸಭಾದಲ್ಲಿ ತನ್ನ ಇಡೀ ಕುಟುಂಬವೇ ನಾಟಕದಲ್ಲಿ ತೊಡಗಿದ್ದರಿಂದ ಈ ಬಾಲಕ ರಂಗದ ಗೀಳು ಬೆಳಸಿಕೊಂಡ. ತನ್ನ ಚಿಕ್ಕಪ್ಪ ಪದ್ಮನಾಭ ಅವರೊಂದಿಗೆ ಯಮುನಾ ಗರ್ವಭಂಗ ಎಂಬ ನಾಟಕದಲ್ಲಿ ಪಾತ್ರ ವಹಿಸಿ ಗಮನ ಸೆಳೆದ ಹಿನ್ನೆಲೆಯಲ್ಲಿ ಬಣ್ಣದ ನಂಟು ಅಂಟಿಕೊಂಡಿತು.
ಸಣ್ಣಪುಟ್ಟ ಬಾಲ ಪಾತ್ರ ಅಭಿನಯಿಸುತ್ತಾ 9ನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ ನಾಗರಾಜ್, ಯುವಕರಾದ ಮೇಲೆ ನೋಡಲು ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರಂತೆ ಹೊಲಿಕೆ ಕಂಡು ಬಂದಿದ್ದರಿಂದ ಅವರಿಗೆ ಅನೇಕ ಹಾಸ್ಯ ಪಾತ್ರಗಳು ಒದಗಿಬಂತು. ಶೇಷಕಮಲ ಕಲಾ ಮಂಡಳಿ, ಎಂ.ಸಿ ಮಹದೇವಪ್ಪ ಅವರ ಕನ್ನಡ ಥಿಯೇಟರ್, ಶ್ರೀಕಂಠೇಶ್ವರ ನಾಟಕ ಮಂಡಳಿ, ಬೆಂಗಳೂರಿನ ಥಿಯೇಟ್ರಿಕಲ್ ಕಂಪನಿ, ಎ.ಎನ್. ಶೇಷಚಾರ್ ಕಂಪನಿಗಳಲ್ಲಿನ ಅನೇಕ ನಾಟಕಗಳಲ್ಲಿ ಹಾಸ್ಯ ನಟರಾಗಿ ಜನರ ಮೆಚ್ಚಿಗೆಗೆ ಪಾತ್ರರಾದರು.
ಸದಾರಮೆ ನಾಟಕದಲ್ಲಿ ಆದಿಮೂರ್ತಿ ಪಾತ್ರ ಅವರಿಗೆ ಹೆಚ್ಚು ಕೀರ್ತಿ ತಂದುಕೊಟ್ಟಿತು. ಬೇಡರ ಕಣ್ಣಪ್ಪದಲ್ಲಿ ಕಾಶಿಯಾಗಿ, ಸತ್ಯ ಹರಿಶ್ಚಂದ್ರದಲ್ಲಿ ನಕ್ಷತ್ರಿಕನಾಗಿ ಹಾಗೂ ಧರ್ಮ ರತ್ನಾಕರ ನಾಟಕದಲ್ಲಿ ನಾಣಿಯಾಗಿ ಅಭಿನಯಿಸಿದರು. ಈ ಎಲ್ಲಾ ಪಾತ್ರಗಳು ನರಸಿಂಹರಾಜು ಅವರು ನಿರ್ವಹಿಸಿದ್ದು ಎಂಬುದು ವಿಶೇಷ. ನಂತರ ಅವರು ಜ್ವಾಲಾ ಮೋಹಿನಿ, ಹಸಿರು ತೋರಣ, ಸಾವಿರ ಮೆಟ್ಟಿಲು, ಶಾಂಭವಿ ಮುಂತಾದ ಚಲನಚಿತ್ರದಲ್ಲಿಯೂ ನಟಿಸಿದರು.
ಬಣ್ಣದ ನಂಟಿನ ಬದುಕಿನ ನಡುವೆ ಮದುವೆಯಾಗದೆ, ಒಂಟಿ ಜೀವನ ನಡೆಸುತ್ತಿರುವ ನಾಗರಾಜ್ ಪ್ರಸ್ತುತ ಮೈಸೂರಿನ ಅಗ್ರಹಾರದಲ್ಲಿ ವಾಸ. ಬರುವ ಪಿಂಚಣಿಯಲ್ಲಿಯೇ ಜೀವನ. ನಾಟಕಗಳು ಕಡಿಮೆಯಾಗುತ್ತಿರುವುದು ಹಾಗೂ ವಯಸ್ಸಿನ ಏರಿಕೆ ಈ ನಟನಲ್ಲಿ ಮುಂದಿನ ಜೀವನ ನಿರ್ವಹಣೆಯ ಆತಂಕ ಹುಟ್ಟಿಸಿದೆ. ಯಾರಲ್ಲೂ ಏನನ್ನೂ ಕೇಳದ ಈ ಸ್ವಾಭಿಮಾನಿ ರಂಗನಟನಿಗೆ ಸ್ವಂತ ಸೂರಿಲ್ಲ. ನನ್ನವರೆಂಬ ಸಂಬಂಧಿಕರಿಲ್ಲ. ಇಲ್ಲಿನ ರಂಗಕರ್ಮಿ ಬಳಗ ಹಾಗೂ ಸಾಹಿತ್ಯ ವಲಯವೇ ಬಂಧುಬಳಗ ಎಲ್ಲಾ...
- ಮಾ. ವೆಂಕಟೇಶ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.