ಸಾಲಿಗ್ರಾಮ: ಮಹಿಳೆ ಅನುಮಾನಾಸ್ಪದ ಸಾವು
ಸಾಲಿಗ್ರಾಮ: ಶ್ರೀರಾಮ ಟ್ರಾನ್ಸ್ಪೋರ್ಟ್ನ ಮಾಲೀಕ ರಾಜೇಗೌಡ ಎಂಬವರ ಪತ್ನಿ ನಾಗಮಣಿ (40) ಅನುಮಾನಾಸ್ಪದವಾಗಿ ಮಂಗಳವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ. ಸಾಲಿಗ್ರಾಮದ ಆದಿಜಾಂಬವ ಕಾಲೋನಿಯ ಮನೆಯಲ್ಲಿ ನಾಗಮಣಿ ಮೃತಪಟ್ಟಿದ್ದಾರೆ. ಪತಿ ರಾಜೇಗೌಡ ಕಾರ್ಯ ನಿಮಿತ್ತ ಸೋಮವಾರ ಮೈಸೂರಿಗೆ ತೆರಳಿದ್ದು, ಮನೆಯಲ್ಲಿ ನಾಗಮಣಿ ಒಬ್ಬರೇ ಇದ್ದರು ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ ಮೈಸೂರಿನಿಂದ ಬಂದ ರಾಜೇಗೌಡರು ಮನೆಗೆ ಬಂದಾಗ ನಾಗಮಣಿ ಮೂಗಿನಲ್ಲಿ ರಕ್ತಸ್ರಾವವಾಗಿ ಮೃತಪಟ್ಟಿರುವುದು ಗೊತ್ತಾಗಿದೆ. ನಾಗಮಣಿ ಅವರ ಮಾಂಗಲ್ಯ ಸರವೇ ನಾಪತ್ತೆಯಾಗಿತ್ತು. ಇದರಿಂದ ಗಾಬರಿಗೊಂಡ ಪತಿಯು ಮನೆಯೊಳಗೆ ಪರಿಶೀಲಿಸಿದಾಗ ಚಿನ್ನದ ಬಳೆಗಳು ಹಾಗೂ 50 ಸಾವಿರ ಹಣ ಇಲ್ಲದಿರುವುದು ಕಂಡುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತರಿಗೆ ವಿನಯ್, ವಿನುತ ಎಂಬ ಇಬ್ಬರು ಮಕ್ಕಳಿದ್ದಾರೆ.
ಮಹಿಳೆ ಶವ ಪತ್ತೆ
ಮೈಸೂರು: ಮಂಡ್ಯ ಜಿಲ್ಲೆ ಮದ್ದೂರು- ಶೆಟ್ಟಿಹಳ್ಳಿ ರೈಲು ನಿಲ್ದಾಣಗಳ ನಡುವೆ 50 ವರ್ಷದ ಅಪರಿಚಿತ ಮಹಿಳೆಯೊಬ್ಬರು ಸೋಮವಾರ ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ. ಚಹರೆ- 50 ವರ್ಷ, 5 ಅಡಿ ಎತ್ತರ, ಸದೃಢ ಮೈಕಟ್ಟು, ಗೋದಿ ಮೈಬಣ್ಣ, ದುಂಡು ಮುಖ, ಬಲಗೈಯಲ್ಲಿ ಒಂದು ಇಂಚು ಸುತ್ತಳತೆಯ ರಂಗೋಲಿ ತರಹ ಹಾಗೂ ಎಡಗೈ ಹೆಬ್ಬೆರಳಿನ ಹತ್ತಿರ ಮೂರು ಚುಕ್ಕಿಗಳಿರುವ ಹಚ್ಚೆ ಗುರುತು ಇದೆ. ಹಸಿರು ಮತ್ತು ಮೆರೂನ್ ಬಣ್ಣದ ಸಿಲ್ಕ್ ಮಾದರಿ ಸೀರೆ, ಹಸಿರು ಬಣ್ಣದ ರವಿಕೆ ಧರಿಸಿದ್ದಾರೆ. ಮೃತರ ದೇಹವನ್ನು ಮಂಡ್ಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಇವರ ವಾರಸುದಾರರ ಇದ್ದಲ್ಲಿ ದೂ. 0821- 2516579 ಸಂಪರ್ಕಿಸಲು ಮೈಸೂರು ರೇಲ್ವೆ ಠಾಣೆ ಪೊಲೀಸರು ಕೋರಿದ್ದಾರೆ.
ಖೋಟಾ ನೋಟು ಪತ್ತೆ
ಪಿರಿಯಾಪಟ್ಟಣ: ಪಟ್ಟಣದ ಎಸ್ಬಿಎಂ ಬ್ಯಾಂಕಿನಲ್ಲಿ 500 ಮುಖಬೆಲೆಯ ಖೋಟಾ ನೋಟು ಪತ್ತೆಯಾಗಿದ್ದು, ಈ ಬಗ್ಗೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬ್ಯಾಂಕಿನಲ್ಲಿ ಆರ್ಬಿಐನವರು ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ 500 ಮುಖಬೆಲೆಯ 7ಎಇ 690127 ನಂಬರಿನ ಖೋಟಾ ನೋಟು ಪತ್ತೆಯಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬ್ಯಾಂಕಿನ ವ್ಯವಸ್ಥಾಪಕ ದಿನೇಶ್ಕುಮಾರ್ ಅಗರವಾಲ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.