ಕ.ಪ್ರ. ವಾರ್ತೆ ್ಣ ಮೈಸೂರು ್ಣ ಮಾ. 29ಮೂರು ಮಕ್ಕಳ ತಾಯಿ ಮೇಲೆ ಪತಿ ಆ್ಯಸಿಡ್ ಹಾಕಿದ ಘಟನೆ ಹಾಸನ ಜಿಲ್ಲೆ ಸಕಲೇಶಪುರದಲ್ಲಿ ನಡೆದಿದ್ದು, ಆ್ಯಸಿಡ್ ದಾಳಿಯಲ್ಲಿ ಗಾಯಗೊಂಡಿರುವ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಕಲೇಶಪುರ ನಿವಾಸಿ ಅಬ್ದುಲ್ ರಹೀಂ ಎಂಬವರ ಪತ್ನಿ ಎಸ್.ಎ. ಶಾನು (38) ಆ್ಯಸಿಡ್ ದಾಳಿಗೆ ಒಳಗಾದವರು. ಅಬ್ದುಲ್ ರಹೀಂ ತನ್ನ ಪತ್ನಿ ಶಾನು ಮೇಲೆ ಆ್ಯಸಿಡ್ ಎರಚಿ, ಈಗ ಜೈಲು ಸೇರಿದ್ದಾನೆ.
ಅಬ್ದುಲ್ ರಹೀಂ ಮತ್ತು ಶಾನು ಅವರ ವಿವಾಹವಾಗಿ 16 ವರ್ಷ ಕಳೆದಿದೆ. ಮೂವರು ಮಕ್ಕಳ ಪೈಕಿ, ಅನಾರೋಗ್ಯದಿಂದ ಹೆಣ್ಣು ಮಗಳೊಬ್ಬಳು ಮೃತಪಟ್ಟಿದ್ದಾರೆ. ಪತ್ನಿ ಶಾನು ಸುಂದರವಾಗಿದ್ದು ಅಬ್ದುಲ್ ರಹೀಂಗೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಪ್ರತಿ ದಿನ ಕುಡಿದು ಬಂದು ಪತ್ನಿಯೊಂದಿಗೆ ಜಗಳ ತೆಗೆದು, ಆ್ಯಸಿಡ್ ಹಾಕುವುದಾಗಿ ಕಳೆದ 10 ವರ್ಷಗಳಿಂದ ಬೆದರಿಕೆ ಹಾಕುತ್ತಿದ್ದ. ಇದನ್ನು ಪ್ರತಿ ದಿನ ಕೇಳುತ್ತಿದ್ದ ಶಾನು ಅವರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.
ಸಕಲೇಶಪುರ ಸ್ಥಳೀಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ದುಡಿಯುತ್ತಿದ್ದ ಶಾನು ಅವರು ಬೆಂಗಳೂರಿನ ಶಾಲೆಯಲ್ಲಿ ಕೆಲಸ ದೊರೆತಿರುವ ವಿಚಾರವನ್ನು ಪತಿ ರಹೀಂಗೆ ಹೇಳಿದ್ದಾರೆ. ಬೆಂಗಳೂರಿಗೆ ಹೋಗಲು ರಹೀಂ ಒಪ್ಪಲಿಲ್ಲ. ಇದೇ ವಿಷಯದಲ್ಲಿ ಫೆ.21 ರಾತ್ರಿ ಜಗಳವಾಡಿದ್ದ ರಹೀಂ, ಆ್ಯಸಿಡ್ ತಂದು ಶಾನು ಅವರ ಮೈಮೇಲೆ ಸುರಿದಿದ್ದ. ಸುಟ್ಟ ಗಾಯಗಳೊಂದಿಗೆ ಸಕಲೇಶಪುರ, ಹಾಸನ, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಪ್ರಸ್ತುತ ಮೈಸೂರಿನ ಲಕ್ಷ್ಮಿಪುರಂನಲ್ಲಿರುವ ಅನ್ನಪೂರ್ಣ ಆರ್ಥೋಪೆಡಿಕ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.