ಮೈಸೂರು: ಉತ್ಕೃಷ್ಟ ದರ್ಜೆಯ ವರ್ಜಿನಿಯಾ ತಂಬಾಕು ಬೆಳೆಗೆ ಹೆಸರಾದ ಪಿರಿಯಾಪಟ್ಟಣ ಕ್ಷೇತ್ರ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಅಸ್ತಿತ್ವದಲ್ಲಿದೆ. ಈ ಬಾರಿ ಮತ್ತೆ ಹಳಬರ ನಡುವೆ ಕದನಕ್ಕೆ ಕಣ ಸಜ್ಜಾಗಿದೆ. ನಾಲ್ಕು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಹಳೆ ಹುಲಿಗಳು. ಈ ಪೈಕಿ ಇಬ್ಬರ ಪಕ್ಷಗಳು ಮಾತ್ರ ಬದಲಾಗಿವೆ.
1952 ರಲ್ಲಿ ಪಕ್ಷೇತರರಾದ ಎಸ್.ಎಂ. ಮರಿಯಪ್ಪ, 1957 ರಲ್ಲಿ ಕಾಂಗ್ರೆಸ್‌ನ ಎನ್.ಆರ್. ಸೋಮಣ್ಣ, 1962 ರಲ್ಲಿ ಕಾಂಗ್ರೆಸ್‌ನ ಕೆ.ಎಂ. ದೇವಯ್ಯ, 1967 ರಲ್ಲಿ ಪಕ್ಷೇತರರಾಗಿ, 1972 ರಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಎಚ್.ಎಂ. ಚನ್ನಬಸಪ್ಪ ಆಯ್ಕೆಯಾಗಿದ್ದರು. 1952 ರಲ್ಲಿ ಗೆದ್ದಿದ್ದ ಸುಂಡವಾಳು ಮರಿಯಪ್ಪನವರ ಆಯ್ಕೆಯನ್ನು ನ್ಯಾಯಾಲಯ ತಾಂತ್ರಿಕ ಕಾರಣಗಳಿಂದ ಅನೂರ್ಜಿತಗೊಳಿಸಿ, ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್‌ನ ಎಚ್.ಎಂ. ಚನ್ನಬಸಪ್ಪ ಅವರನ್ನೇ ಶಾಸಕರೆಂದು ಘೋಷಿಸಿದ ಪ್ರಕರಣವೂ ನಡೆದಿತ್ತು. ಚನ್ನಬಸಪ್ಪ ಅವರು 1957 ರಲ್ಲಿ ಪಕ್ಕದ ಕೆ.ಆರ್. ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. 1962 ರಲ್ಲಿ ಅಲ್ಲಿ ಪರಾಭವಗೊಂಡಿದ್ದರು.
1978 ರಲ್ಲಿ ಜನತಾಪಕ್ಷದಿಂದ ಆಯ್ಕೆಯಾಗಿದ್ದ ಕೆ.ಎಸ್. ಕಾಳಮರೀಗೌಡರು ನಂತರ ಕಾಂಗ್ರೆಸ್ ಸೇರಿ, 1983 ರಲ್ಲಿ ಆ ಪಕ್ಷದ ಟಿಕೆಟ್ ಮೇಲೆ 2ನೇ ಬಾರಿ ಆಯ್ಕೆಯಾದರು. 1985ರಲ್ಲಿ ಅವರಿಗೆ ಟಿಕೆಟ್ ಸಿಗಲಿಲ್ಲ. ಎಲ್. ಆನಂದ್ ಕಾಂಗ್ರೆಸ್ ಅಭ್ಯರ್ಥಿ. ಆದರೆ ಗೆದ್ದವರು ಮಾತ್ರ ಜನತಾ ಪಕ್ಷದ ಕೆ.ವೆಂಕಟೇಶ್. 1989 ರಲ್ಲಿ ಜನತಾ ಪರಿವಾರ ವಿಭಜನೆಯಿಂದಾಗಿ ಕಾಂಗ್ರೆಸ್‌ನ ಕಾಳಮರೀಗೌಡ ಮೂರನೇ ಬಾರಿಗೆ ಗೆದ್ದರು. ಕೆ. ವೆಂಕಟೇಶ್ ಜನತಾದಳದಿಂದ, ಕೆ.ಆರ್. ನಗರದ ಮಾಜಿ ಶಾಸಕ ದಿ.ಮಂಚನಹಳ್ಳಿ ಮಹದೇವ್ ಅವರ ತಂದೆ ಹಾಗೂ ನಿವೃತ್ತ ಕೆಎಎಸ್ ಅಧಿಕಾರಿ ದಿ.ಎಸ್.ಎಂ. ಅನಂತರಾಮು ಸಜಪ ಅಭ್ಯರ್ಥಿಯಾಗಿದ್ದರು.
ಮೂರು ಬಾರಿ ಗೆದ್ದರೂ ಕಾಳಮರೀಗೌಡರು ಸಚಿವರಾಗಲು ಸಾಧ್ಯವಾಗಲಿಲ್ಲ. 1999ರ ಚುನಾವಣೆಯಲ್ಲಿ ಪಿರಿಯಾಪಟ್ಟಣಕ್ಕೆ ಪ್ರಚಾರಕ್ಕೆ ಬಂದ ಅಂದಿನ ಕೆಪಿಸಿಸಿ ಅಧ್ಯಕ್ಷ ಎಸ್.ಎಂ. ಕೃಷ್ಣ ಅವರು ಈ ಬಾರಿ ಗೌಡರನ್ನು ಗೆಲ್ಲಿಸಿ, ಮಂತ್ರಿ ಮಾಡುತ್ತೇನೆ ಎಂದರು. ಆದರೆ ಗೌಡರು ಅನಿರೀಕ್ಷಿತವಾಗಿ ಸೋತರು. 2004 ರಲ್ಲಿ ಜೆಡಿಎಸ್‌ನಿಂದ, 2008 ರಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಕೆ. ವೆಂಕಟೇಶ್ ಆಯ್ಕೆಯಾದರು.
ವೆಂಕಟೇಶ್ ಕೈ ಅಭ್ಯರ್ಥಿ: ಈ ಕ್ಷೇತ್ರದಲ್ಲಿ ಕೆ. ವೆಂಕಟೇಶ್ 1985 ರಿಂದಲೂ ಕಾಯಂ ಅಭ್ಯರ್ಥಿ. ನಾಲ್ಕು ಬಾರಿ ಗೆದ್ದು, ಎರಡು ಬಾರಿ ಸೋತಿದ್ದಾರೆ. ಈ ಬಾರಿ ವೆಂಕಟೇಶ್ ಅವರೇ ಕಾಂಗ್ರೆಸ್ ಅಭ್ಯರ್ಥಿ. ತಾಲೂಕು ಜೆಡಿಎಸ್ ಅಧ್ಯಕ್ಷ ಕೆ. ಮಹದೇವ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
1999 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದ ಎಚ್.ಸಿ. ಬಸವರಾಜು ಅವರು 2004ರ ಚುನಾವಣೆಗೆ ಮುನ್ನಾ ಕಾಂಗ್ರೆಸ್ ಸೇರಿದ್ದರೂ ಟಿಕೆಟ್ ಸಿಗದಿದ್ದಾಗ ಮಲ್ಯ ನೇತೃತ್ವದ ಜನತಾಪಕ್ಷದಿಂದ ಸ್ಪರ್ಧಿಸಿ, ಸೋತಿದ್ದರು. ಈಗ ಕೆಜೆಪಿಯಲ್ಲಿದ್ದು, ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ನೀರಾವರಿ ಸಚಿವರೂ ಆಗಿದ್ದ ದಿ.ಎಚ್.ಎಂ. ಚನ್ನಬಸಪ್ಪ ಅವರ ಪುತ್ರರು. ಟಿ.ಡಿ. ಗಣೇಶ್ 2004 ಹಾಗೂ 2008 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗಣನೀಯ ಮತ ಪಡೆದಿದ್ದರು. ಕಳೆದ ಚುನಾವಣೆ ನಂತರ ಕಾಂಗ್ರೆಸ್ ಸೇರಿ ಕೆಪಿಸಿಸಿ ಸದಸ್ಯರಾಗಿದ್ದರು. ಸ್ಥಳೀಯ ಶಾಸಕರು ಹಾಗೂ ಅವರ ಬೆಂಬಲಿಗರು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಬಿಎಸ್‌ಆರ್ ಕಾಂಗ್ರೆಸ್ ಸೇರಿದ್ದಾರೆ. ಬಿಜೆಪಿಯಲ್ಲಿ ಕಳೆದ ಬಾರಿ ಬಿಎಸ್ಪಿ ಅಭ್ಯರ್ಥಿಯಾಗಿ ಸೋತಿದ್ದ ಬಿ.ಎಸ್. ರಾಮಚಂದ್ರು, ಆರ್.ಟಿ. ಸತೀಶ್, ಜಿಪಂ ಮಾಜಿ ಉಪಾಧ್ಯಕ್ಷ ವಿ.ಜಿ. ಅಪ್ಪಾಜಿಗೌಡ, ಪಸನ್ನಕೇಶವ, ವಿಕ್ರಂರಾಜ್, ಕೃಷ್ಣೇಗೌಡ, ಅಣ್ಣೇಗೌಡ ಹೆಸರುಗಳಿವೆ. ಯಾವುದೂ ಅಂತಿಮವಾಗಿಲ್ಲ.
1999 ರಲ್ಲಿ ಈ ಪಕ್ಷದ ಎಚ್.ಸಿ. ಬಸವರಾಜು ಗೆದ್ದಿದ್ದರು ಎಂಬುದನ್ನು ಹೊರತುಪಡಿಸಿದರೆ ಇದೊಂದು ರೀತಿಯಲ್ಲಿ ಕಾಂಗ್ರೆಸ್ ಮತ್ತು ಜನತಾ ಪರಿವಾರದ ಜಿದ್ದಾಜಿದ್ದಿನ ಕಣ. ಕೆ.ಎಸ್. ಕಾಳಮರೀಗೌಡ- ಕೆ. ವೆಂಕಟೇಶ್ ಪರಸ್ವರ ಎದುರಾಳಿಗಳಾಗುತ್ತಾ ಸರದಿಯ ಮೇಲೆ ಗೆಲ್ಲುತ್ತಿದ್ದರು. ಅವರಿಬ್ಬರೂ ಕಿತ್ತೂರಿನವರು ಹಾಗೂ ದಾಯಾದಿಗಳು. ಹೀಗಾಗಿ ಗೆಲುವಿಗಾಗಿ ಕಿತ್ತೂರಿನ ದಾಯಾದಿಗಳ ನಡುವೆಯ ಕಾದಾಟ. ಆದರೆ ಇದಕ್ಕೆ ಬ್ರೇಕ್ ಹಾಕಿದ್ದು ಎಚ್.ಸಿ. ಬಸವರಾಜು. 1999ರ ಚುನಾವಣೆಯ ನಂತರ ಕಾಳಮರೀಗೌಡರ ನಿಧನರಾದರು. 2004 ರಲ್ಲಿ ಕಾಳಮರೀಗೌಡರ ಸೋದರ ಕೆ.ಎಸ್. ಚಂದ್ರೇಗೌಡರಿಗೆ ಟಿಕೆಟ್ ನೀಡಿದರೂ ಗೆಲ್ಲಲಿಲ್ಲ. 2008ರ ವೇಳೆಗೆ ಕೆ. ವೆಂಕಟೇಶ್ ಅವರು ಸಿದ್ದರಾಮಯ್ಯ ಅವರೊಂದಿಗೆ ಕಾಂಗ್ರೆಸ್ ಸೇರಿದ್ದರಿಂದ ಕಿತ್ತೂರು ಕದನ ನಿಂತಿದೆ.
ಈ ಬಾರಿ ಒಕ್ಕಲಿಗ ಮತಗಳು ವೆಂಕಟೇಶ್, ಮಹದೇವ್ ನಡುವೆ ವಿಭಜನೆಯಾಗಲಿದ್ದು, ವೀರಶೈವ ಮತಗಳು ಬಸವರಾಜುಗೆ ಸಿಕ್ಕಿದರೆ, ನಾಯಕ, ಕುರುಬ. ದಲಿತ ಮತ್ತು ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಲಿವೆ. ಬಿಎಸ್‌ಆರ್‌ನ ಗಣೇಶ್ ನಾಯಕ ಮತ ಸೆಳೆದಲ್ಲಿ ಫಲಿತಾಂಶದಲ್ಲಿ ವ್ಯತ್ಯಾಸ ಕಾಣಬಹುದು.