ಕ.ಪ್ರ.ವಾರ್ತೆ ಮೈಸೂರು ಮಾ.30
ಈಗಿನ ರಾಜಕಾರಣಿಗಳಲ್ಲಿ ಸ್ವಾರ್ಥ ಹೆಚ್ಚಾಗಿದೆ ಎಂದು ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಎಂ. ಮಹದೇವ್ ವಿಷಾದಿಸಿದರು.
ಮೈಸೂರಿನ ವಿಶ್ವಮಾನವ ವಿದ್ಯಾರ್ಥಿ- ಯುವ ವೇದಿಕೆಯು ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಚುನಾವಣೆ- ಯುವ ಜನತೆಯ ಪಾತ್ರ ಕುರಿತ ವಿಚಾರಗೋಷ್ಠಿ ಹಾಗೂ ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಈಗಿನ ಚುನಾಯಿತ ಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡುತ್ತಿದ್ದಾರೆಯೇ ಪ್ರಶ್ನೆ ಎದ್ದಿದೆ. ಹಿಂದಿನ ರಾಜಕಾರಣಿಗಳು ತ್ಯಾಗ, ಬಲಿದಾನ ಮಾಡಿದ್ದರು. ಅವರಲ್ಲಿ ಸ್ವಾರ್ಥ ಇರಲಿಲ್ಲ. ಆದರೆ, ಈಗಿನ ರಾಜಕಾರಣಿಗಳ ಸ್ವಾರ್ಥವೂ ದೇಶದ ಅಭಿವೃದ್ಧಿಗೆ ಮಾರಕ ಆಗಿದೆ. ಸಿದ್ಧಾಂತ, ನೀತಿ, ಮೌಲ್ಯ ಇರುವವರು ಈಗಿನ ಚುನಾವಣೆಗಳಲ್ಲಿ ಜಯ ಸಾಧಿಸುವುದು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ವಾಮ ಮಾರ್ಗದಿಂದಲೇ ಗೆಲವು ಸಾಧ್ಯ ಎಂಬ ನಂಬಿಕೆ ಉಳಿದುಕೊಂಡಿದೆ ಎಂದರು.
ಯಾವುದೇ ರಾಜಕೀಯ ಪಕ್ಷಗಳಲ್ಲಿ ನೀತಿ, ಸಿದ್ಧಾಂತ ಇದ್ದರೂ ಇಲ್ಲದಂತಾಗಿದೆ. ಪ್ರತಿಯೊಬ್ಬರೂ ಅನುಕೂಲಸಿಂಧು ರಾಜಕಾರಣ ಮಾಡುತ್ತಿದ್ದಾರೆ. ಮತದಾರರು ಸಹ ಭ್ರಷ್ಟರಾಗಿದ್ದಾರೆ. ಮತದಾರರು ಮೊದಲು ಶುದ್ಧರಾಗಬೇಕು. ಇದನ್ನು ಹೋಗಲಾಡಿಸಲು ಯುವಜನತೆ ಮುಂದಾಗಬೇಕು. ನಗರ ಪ್ರದೇಶಗಳಲ್ಲಿ ಮತದಾನ ಮಾಡುವವರ ಸಂಖ್ಯೆ ಹೆಚ್ಚಾಗಬೇಕು. ರಾಜಕೀಯ ಅಕ್ರಮಗಳಿಗೆ ವಿದ್ಯಾರ್ಥಿಗಳ ಬಳಕೆ ಸರಿಯಲ್ಲ. ಈ ಬಗ್ಗೆ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.
ದೇಶ ಕಟ್ಟಲು ತ್ಯಾಗ, ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಎಲ್ಲರ ಮಧ್ಯೆ ಸಹೋದರತ್ವ ಇರಬೇಕು. ಬಡವರು, ಶ್ರೀಮಂತರ ಎಂಬ ತಾರತಮ್ಯ ಹೊಗಬೇಕು. ಈಗಿನ ರಾಜಕೀಯ ಪರಿಸ್ಥಿತಿಯಿಂದ ಸಕ್ರಿಯ ರಾಜಕಾರಣಿಗಳಿಗೆ ಬೇಸರ ಆಗಿದೆ. ಇದು ವಿದ್ಯಾರ್ಥಿಗಳಿಗೂ ಬೇಸರ ತಂದಿದೆ ಎಂದರು.
ರಾಜಕೀಯ ಪ್ರವೇಶಿಸಿ: ಮೈಸೂರು ನಗರದ ಕೆ.ಆರ್. ಉಪ ವಿಭಾಗದ ಎಸಿಪಿ ಎ.ಎನ್. ಪ್ರಕಾಶ್‌ಗೌಡ ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯದರ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಚುನಾವಣೆಗಳಲ್ಲಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಓದು ಮುಗಿದ ಮೇಲೆ ರಾಜಕೀಯ ಪ್ರವೇಶಿಸಿ, ಉತ್ತಮ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಲ್ಲಿ ಹೋರಾಟ ಮನೋಭಾವ ಕಡಿಮೆ ಆಗಿದೆ. ಕೆಟ್ಟದನ್ನು ಖಂಡಿಸುವ, ಒಳ್ಳೆಯದನ್ನು ಪ್ರೋತ್ಸಾಹಿಸುವ ಮನೋಭಾವ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.
ಇದೇ ವೇಳೆ ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು. ಮಾಜಿ ಮೇಯರ್ ಪಿ. ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ನ.ಲಿ. ಕೃಷ್ಣ ವಿಚಾರ ಮಂಡಿಸಿದರು. ವಿಶ್ವಮಾನವ ವಿದ್ಯಾರ್ಥಿ ಯುವ ವೇದಿಕೆಯ ರಾಜ್ಯಾಧ್ಯಕ್ಷ ಎಂ.ಜೆ. ಸುರೇಶ್‌ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಕಾರ್ಯಾಧ್ಯಕ್ಷ ಎಚ್.ಎ. ಶರತ್ ಸ್ವಾಗತಿಸಿದರು.