ಪಿಯುಸಿಯಲ್ಲಿ ಫೇಲ್: ವಿದ್ಯಾರ್ಥಿನಿ ಆತ್ಮಹತ್ಯೆ
ಪಿರಿಯಾಪಟ್ಟಣ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತೀರ್ಣಳಾಗಿದ್ದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. ತಾಲೂಕಿನ ಸುಳಗೋಡು ಗ್ರಾಮದ ಎಸ್.ಎಸ್. ಚೈತ್ರಾ ಮೃತಪಟ್ಟ ವಿದ್ಯಾರ್ಥಿನಿ. ಚೈತ್ರಾ ಬೆಂಗಳೂರಿನ ಎಸ್ಎಸ್ಎಂಆರ್ವಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಪರೀಕ್ಷೆ ಬರೆದು ಸ್ವಗ್ರಾಮ ಸುಳಗೋಡಿಗೆ ಬಂದಿದ್ದು ಫಲಿತಾಂಶ ಪ್ರಕಟವಾದ ಮೇ 6ರಂದು ಅನುತೀರ್ಣಳಾಗಿರುವುದನ್ನು ತಿಳಿದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಆಕೆಯನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾಳೆ.