ಪಿಯುಸಿಯಲ್ಲಿ ಫೇಲ್: ವಿದ್ಯಾರ್ಥಿನಿ ಆತ್ಮಹತ್ಯೆ
ಪಿರಿಯಾಪಟ್ಟಣ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತೀರ್ಣಳಾಗಿದ್ದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. ತಾಲೂಕಿನ ಸುಳಗೋಡು ಗ್ರಾಮದ ಎಸ್.ಎಸ್. ಚೈತ್ರಾ ಮೃತಪಟ್ಟ ವಿದ್ಯಾರ್ಥಿನಿ. ಚೈತ್ರಾ ಬೆಂಗಳೂರಿನ ಎಸ್ಎಸ್ಎಂಆರ್ವಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಪರೀಕ್ಷೆ ಬರೆದು ಸ್ವಗ್ರಾಮ ಸುಳಗೋಡಿಗೆ ಬಂದಿದ್ದು ಫಲಿತಾಂಶ ಪ್ರಕಟವಾದ ಮೇ 6ರಂದು ಅನುತೀರ್ಣಳಾಗಿರುವುದನ್ನು ತಿಳಿದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಆಕೆಯನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾಳೆ.
ಹಾವು ಕಚ್ಚಿ ಕೃಷಿಕ ಸಾವು
ಶಿಡ್ಲಘಟ್ಟ: ರೇಷ್ಮೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಾವು ಕಚ್ಚಿ ಕೃಷಿಕನೊಬ್ಬ ಮೃತಪಟ್ಟಿರುವ ದುರ್ಘಟನೆ ತಾಲೂಕಿನ ಎ.ಹುಣಿಸೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಆನೂರು ಗ್ರಾಮ ಪಂಚಾಯಿತಿಗೆ ಸೇರಿದ ಎ. ಹುಣಿಸೇನಹಳ್ಳಿ ಗ್ರಾಮದಲ್ಲಿ ಮುನಿರಾಜು ರಾತ್ರಿ 7.30 ರ ಸಮಯದಲ್ಲಿ ರೇಷ್ಮೆ ಬೆಳೆಗೆ ನೀರನ್ನು ಹರಿಸಲು ಹೋಗಿದ್ದು ಆತನಿಗೆ ಕತ್ತಲಲ್ಲಿ ಹಾವು ಸಮೀಪದಲ್ಲಿರುವುದು ಕಾಣಿಸಿಲ್ಲ. ಇದರಿಂದ ಕೆಲಸದಲ್ಲಿ ಮಗ್ನನಾಗಿದ್ದು ಆಗ ವಿಷಪೂರಿತ ಹಾವು ಕಚ್ಚಿದೆ. ತಕ್ಷಣ ಅಸ್ವಸ್ಥಗೊಂಡ ಮುನಿರಾಜನನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.ಪುರಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.