ಆತ್ಮವಿಲ್ಲದ ಆಡಳಿತ ಜನರಿಗೆ ಸ್ಪಂದಿಸದು
ಕ.ಪ್ರ.ವಾರ್ತೆ ಮೈಸೂರು ಮೇ 11
ಯಾವುದೇ ಸರ್ಕಾರ ಆತ್ಮವಿಲ್ಲದೆ ನಡೆಸುವ ಆಡಳಿತವು ಜನರಿಗೆ ಸ್ಪಂದಿಸಲಾರದು ಎಂದು ವಿಚಾರವಾದಿ ಪ್ರೊ. ಎಚ್.ಎಲ್. ಕೇಶವಮೂರ್ತಿ ಹೇಳಿದರು.
ನೆಲದನಿ ಸಾಂಸ್ಕೃತಿಕ ಸಂಸ್ಥೆಯು ಕಲಾಮಂದಿರದ ಮನೆಯಂಗಳದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಕರ್ತ ಹಾಗೂ ಚಿಂತಕ ಪಿ. ಲಂಕೇಶ್- ಒಂದು ನೆನಪು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನರ ನೋವಿನ ಧ್ವನಿಯನ್ನು ಆಲಿಸುವಂತಹ ಆತ್ಮವಿರುವ ಆಡಳಿತ ಅವಶ್ಯಕ. ನಾಗರಿಕರ ಕಷ್ಟಗಳನ್ನು ಆಲಿಸುವ ಕಿವಿಯುಳ್ಳ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಅಂಗರಕ್ಷಕರು ಕೇವಲ ಜನಪ್ರತಿನಿಧಿಗಳ ದೇಹವನ್ನು ಮಾತ್ರವಲ್ಲ ಅವರ ಆತ್ಮವನ್ನು ಸೆರೆ ಹಿಡಿದಿಡುತ್ತಾರೆ. ಹೀಗಾಗಿ ಸಾಮಾನ್ಯ ಜನರಿಗೆ ಸ್ಪಂದಿಸಲು ಸಾಧ್ಯವಾಗದ ಪರಿಸ್ಥಿತಿ ಉದ್ಭವವಾಗಲಿದೆ ಎಂದರು.
ಜಾತಿ ಪ್ರಧಾನವಲ್ಲ: ಚುನಾವಣೆಯಲ್ಲಿ ಜಾತಿ ಮತ್ತು ಹಣ ಪ್ರಧಾನವಾಗಿ ಕೆಲಸ ಮಾಡುತ್ತದೆ ಎಂಬುದು ಸರಿಯಲ್ಲ. ಜಾತಿಯ ಆಧಾರದ ಮೇಲೆ ಚುನಾವಣಾ ಸಮೀಕ್ಷೆ ನಡೆಸುವುದು ಸರಿಯಲ್ಲ. ವೈ.ಎಸ್.ವಿ. ದತ್ತಾ ಅವರು ಸ್ಪರ್ಧಿಸಿದ್ದ ಕಡೂರಿನಲ್ಲಿ ಅವರ ಸುಮುದಾಯ 600 ಮಂದಿ ಮಾತ್ರ. ಆದರೂ ಅವರು ಗೆದ್ದಿದ್ದಾರೆ. ಅಂತೆಯೇ ಯಾವುದೇ ಶಂಕುಸ್ಥಾಪನೆ ಹಾಗೂ ಪೂಜೆ ಇಲ್ಲದೆ ಜನರ ತೆರಿಗೆ ಹಣ ವ್ಯಯ ಮಾಡದೆ ಅಭಿವೃದ್ಧಿ ಯೋಜನೆ ಸಾಕಾರಗೊಳಿಸಿ ಜನಮನ್ನಣೆ ಗಳಿಸಿದ್ದ ಹಾಲಾಡಿ ಶ್ರೀನಿವಾಸಶೆಟ್ಟಿ ಅವರನ್ನು ಮತದಾರರೇ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದು ಎಂದರು.
ಯಾವುದೇ ಒಂದು ಜಾತಿಯ ನಾಯಕನಿಗೆ ಅಧಿಕಾರ ದೊರಕಿದರೆ ಇಡೀ ಸಮುದಾಯ ಉದ್ಧಾರವಾಗುತ್ತೆ ಎಂದು ಭಾವಿಸುವುದಿದೆ. ಅಲ್ಲದೆ ಆ ಸಮುದಾಯದ ಕಟ್ಟಕಡೆಯ ವ್ಯಕ್ತಿ ಕೂಡ ತಮ್ಮ ಜನಾಂಗದವರೊಬ್ಬರು ಸಿಎಂ ಆದರೂ ಎಂದು ಹೆಮ್ಮೆ ಪಡುತ್ತಾರೆ. ಇಂತಹ ಮನೋಭಾವ ಯಾಕೆ ಬರುತ್ತದೆ ಎಂದು ಪ್ರಶ್ನಿಸಿದ ಅವರು, ಜಾತಿ ವಾಸ್ತವ ಅದಕ್ಕೆ ಆಕರ್ಷಿಸುವ ಶಕ್ತಿಯಿದೆ ಎಂಬುದನ್ನು ಮರೆಯುವಂತಿಲ್ಲ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಳೆದ 5 ವರ್ಷಗಳಿಂದ ಆಡಳಿತ ನಡೆಸಿ ಅಂಧಕಾರವನ್ನು ನಿರ್ಮಿಸಿತ್ತು. ಅದೀಗ ತೊಲಗಿರುವುದು ನಾಡಿನ ಜನರಿಗೆ ನೆಮ್ಮದಿ ತಂದಿದೆ. ಮಲ್ಲಿಕಾರ್ಜುನ ಖರ್ಗೆ ಅವರು ನಾನು ದಲಿತನೆಂದು ಸಿಎಂ ಸ್ಥಾನ ನೀಡಬೇಡಿ. ದಕ್ಷತೆಯನ್ನು ಹಾಗೂ ಪಕ್ಷ ನಿಷ್ಠೆ ಪರಿಗಣಿಸಿ ಎಂದು ಹೇಳಿದ್ದು ನಾಯಕತ್ವ ಗುಣದ ವಿಶೇಷತೆ ಎಂದು ಅವರು ಬಣ್ಣಿಸಿದರು.
ಪಿ.ಲಂಕೇಶ್ ಅವರ ಬದುಕು ಬರಹ ಕುರಿತು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಿಂತಕ ಬಿ.ಎನ್ ಶ್ರೀರಾಮ್, ಸಾಹಿತಿ ಡಾ. ಹಾಲತಿ ಸೋಮಶೇಖರ್, ಯುವ ಸಾಹಿತಿ ಮಂಜನಾಥ್ ಲತಾ ಅವರು ಮಾತನಾಡಿದರು.
ಸಮತಾ ವೇದಿಕೆ ಅಧ್ಯಕ್ಷೆ ಮೀರಾ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಅಧ್ಯಕ್ಷ ಡಾ. ವೈ.ಡಿ. ರಾಜಣ್ಣ ಪ್ರಾಸ್ತಾವಿಕ ಮಾತುಗಳಾಡಿದರು. ಕಾರ್ಯಾಧ್ಯಕ್ಷ ಟಿ. ಸತೀಶ್ ಜವರೇಗೌಡ ಸ್ವಾಗತಿಸಿದರು. ಖಜಾಂಚಿ ಟಿ. ಲೋಕೇಶ್ ಹುಣಸೂರು ನಿರೂಪಿಸಿದರು.