ಸಂಸದರೇ ಕಪ್ಪಡಿಯಲ್ಲಿ ಸತ್ಯ ಮಾಡಿ ಆರೋಪ ಸಾಬೀತು ಮಾಡಿ
ಕ.ಪ್ರ.ವಾರ್ತೆ ಕೆ.ಆರ್. ನಗರ ಮೇ 11
ಮತದಾರ ಪ್ರಭುಗಳು ನನ್ನನ್ನು ಕೈಬಿಡದೆ ಎರಡನೇ ಬಾರಿಗೆ ಪುನರಾಯ್ಕೆ ಮಾಡಿದ್ದು, ನಮ್ಮ ಪಕ್ಷದ ಕಾರ್ಯಕರ್ತರು, ತಾಲೂಕಿನ ಮತಬಾಂಧವರೆ ನನ್ನ ದೇವರು ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಕ್ಷೇತ್ರದಲ್ಲಿ ನನ್ನನ್ನು ಸೋಲಿಸಲು ಕಾಂಗ್ರೆಸ್ ಪಕ್ಷದವರು ಕುತಂತ್ರ ಮಾಡಿ ಸುಳ್ಳು ಆರೋಪಗಳ ಮೂಲಕ ಮತದಾರರನ್ನು ತಮ್ಮತ್ತ ಸೆಳೆಯಲು ಶತ ಪ್ರಯತ್ನ ಮಾಡಿದರು. ಸಂಸದ ಎಚ್. ವಿಶ್ವನಾಥ್ ಚುನಾವಣೆಗೂ ಮುನ್ನ ನನ್ನ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದು, ಸದ್ಯದಲ್ಲೇ ತಾಲೂಕಿನ ಮತದಾರರಿಗೆ ಮತ್ತು ನನ್ನ ಗೆಲವಿಗೆ ದುಡಿದ ಪಕ್ಷದ ಕಾರ್ಯಕರ್ತರು, ಹಿತೈಷಿಗಳಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಿದ್ದು, ಅಲ್ಲಿ ಬಹಿರಂಗವಾಗಿ ಸಂಸದರ ಆರೋಪಗಳಿಗೆ ಉತ್ತರ ನೀಡುತ್ತೇನೆ ಎಂದು ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಸಕ್ಕರೆ ಮಾರಿ ಅಕ್ಕಿ ವಿತರಿಸಿದ್ದೇನೆ, ಅಂಬಿಕಾ ಷುಗರ್ರ್ ಅವರಿಂದ ಲಂಚ ಪಡೆದಿದ್ದೇನೆ, ನಾಲಾ ಆಧುನೀಕರಣ ಕಾಮಗಾರಿಯಲ್ಲಿ ಕಿಕ್ಬ್ಯಾಕ್ ಪಡೆದಿದ್ದೇನೆ ಮತ್ತು ರಾಜ್ಯದ 15 ಭ್ರಷ್ಟ ರಾಜಕಾರಣಿಗಳ ಪೈಕಿ ನಾನು ಒಬ್ಬ ಎಂದು ಹಿರೇಮಠ್ರಿಂದ ಹೇಳಿಸಿ ಸುಳ್ಳು ಆರೋಪ ಮಾಡಿದ ವಿಶ್ವನಾಥ್ ಅವರಿಗೆ ಸಾರ್ವಜನಿಕವಾಗಿ ಉತ್ತರಿಸುತ್ತೇನೆ ಎಂದು ಗುಡುಗಿದರು.
ಕಪ್ಪಡಿಯಲ್ಲಿ ಸತ್ಯ ಮಾಡಲಿ: ನನ್ನ ಮೇಲಿನ ಆರೋಪಗಳಿಗೆ ಸಾಕ್ಷಿ ಹೇಗೆ ಕೊಡುವುದು ಎಂದು ಸಂಸದರು ಕೇಳಿದ್ದಾರೆ. ನಾನು ಯಾವ ಸಾಕ್ಷಿಯನ್ನು ಕೇಳುವುದಿಲ್ಲ. ಅವರಿಗೆ ಮನಸಾಕ್ಷಿ, ದೇವರ ಮೇಲೆ ನಂಬಿಕೆ ಇದ್ದರೆ ಹಿಂದೆ ಪ್ರತಿ ಮಾತಿಗೂ ಮಾಜಿ ಸಚಿವ ಎಸ್. ನಂಜಪ್ಪ ಅವರನ್ನು ಕಪ್ಪಡಿಗೆ ಸತ್ಯ ಮಾಡಲು ಕರೆಯುತ್ತಿದ್ದರು. ಈಗ ನಾನು ಅವರನ್ನು ಅಲ್ಲಿಗೆ ಕರೆಯುತ್ತಿದ್ದೇನೆ. ಎಚ್. ವಿಶ್ವನಾಥ್ ಕಪ್ಪಡಿಗೆ ಬಂದು ಆರೋಪ ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
ಸಂಸದರು ಮಾಡಿರುವ ಆರೋಪಗಳಲ್ಲಿ ಒಂದು ಆರೋಪ ಸಾಬೀತಾದರೂ ನಾನು ರಾಜಕೀಯ ಜೀವನದಿಂದ ನಿವೃತ್ತಿಯಾಗುತ್ತೇನೆ. ಇಲ್ಲದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ ಸಾ.ರಾ. ಮಹೇಶ್ ಹಿರಿಯ ರಾಜಕಾರಣಿಯಾಗಿರುವ ಅವರು ಇನ್ನಾದರೂ ತಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕು ಅಧ್ಯಕ್ಷ ಚಂದ್ರಶೇಖರ್, ನಗರಾಧ್ಯಕ್ಷ ಡಿ.ಸಿ. ಮಂಜುನಾಥ್, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ. ಸೋಮಶೇಖರ್, ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ.ಟಿ. ಕುಮಾರ್, ಹೊಸಹಳ್ಳಿ ವೆಂಕಟೇಶ್, ಎಚ್.ಸಿ. ಕುಮಾರ್, ಬಸವರಾಜಪುರ ರವಿಕುಮಾರ್, ಪುರಸಭಾ ಸದಸ್ಯರಾದ ಪಿ. ವಿನಯ್, ಉಮೇಶ್, ಕೆ.ಎಲ್. ಜಗದೀಶ್, ಮಾಜಿ ಅಧ್ಯಕ್ಷ ಡಿ. ಕಾಂತರಾಜು, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾದಿಕ್ಖಾನ್, ಸದಸ್ಯ ನಾಗಣ್ಣ, ಎಪಿಎಂಸಿ ನಿರ್ದೇಶಕ ಚಂದಗಾಲು ನಂಜುಂಡಸ್ವಾಮಿ, ಮುಖಂಡರಾದ ಚೌಕಹಳ್ಳಿರಾಜಣ್ಣ, ಶಿವಲಿಂಗೇಗೌಡ ಇದ್ದರು.
ಸಂತಸ: ಸಿದ್ದರಾಮಯ್ಯ ಅವರು ದಶಕಗಳ ಕಾಲ ಜನಪರ ಹೋರಾಟ ಮಾಡಿ ಮೇಲೆ ಬಂದಿರುವ ಹಿಂದುಳಿದ ವರ್ಗಗಳ ನಾಯಕ. ಅವರು ಮುಖ್ಯಮಂತ್ರಿಗಳಾಗುವುದು ನನಗೂ ಅತ್ಯಂತ ಸಂತಸದ ವಿಷಯ. ಒಂದು ವರ್ಗದ ನಾಯಕರಲ್ಲದೆ ಎಲ್ಲ ಸಮಾಜದ ನಾಯಕರಾಗಿರುವವರನ್ನು ಒಂದೇ ವರ್ಗಕ್ಕೆ ಸೀಮಿತಗೊಳಿಸಬಾರದು. ಅಂತಹವರ ಹೆಸರು ಹೇಳಿಕೊಂಡು ಸಮಾಜದ ಶಾಂತಿ ಕದಡಬೇಡಿ ಎಂದು ಸಾ.ರಾ. ಮಹೇಶ್ ಹೇಳಿದರು.