ಇಂದು ಸಿದ್ಧಲಿಂಗಪುರದ ದೇಗುಲ ಉದ್ಘಾಟನೆ
ಕ.ಪ್ರ.ವಾರ್ತೆ ಹುಣಸೂರು ಮೇ 12
ತಾಲೂಕಿನ ಕಸಬಾ ಹೋಬಳಿಗೆ ಸೇರಿದ ಆಸ್ಪತ್ರೆ ಕಾವಲ್ ಗ್ರಾಪಂ ವ್ಯಾಪ್ತಿಯ ಸಿದ್ದಲಿಂಗಪುರದಲ್ಲಿ (ಚಿಕ್ಕಬಲ್ಲೇನಹಳ್ಳಿ) ಗ್ರಾಮಸ್ಥರೇ ಸೇರಿ ನಿರ್ಮಿಸಿರುವ ಸಿದ್ಧಿವಿನಾಯಕ, ಬಸವೇಶ್ವರ ಹಾಗೂ ಕರುಮಾರಿಯಮ್ಮ ದೇವಾಲಯಗಳ ಉದ್ಘಾಟನೆಯು ಮೇ 13 ಮತ್ತು 14 ರಂದು ನೆರವೇರಲಿದೆ.
ಮೇ 13ರಂದು ಸಿದ್ಧಿವಿನಾಯಕ ಹಾಗೂ ಬಸವೇಶ್ವರ ದೇವಾಲಯಗಳ ಉದ್ಘಾಟನೆ ನಡೆಯಲಿದೆ. ಉಕ್ಕಿನಕಂತೆ ಮಾಂಬಳ್ಳಿ ಮಠದ ಸಾಂಬಸದಾಶಿವ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬೆಳಗ್ಗೆ 6ಕ್ಕೆ ರುದ್ರಾಭಿಷೇಕ, ಅಷ್ಟೋತ್ತರ ಬಿಲ್ವಪೂಜೆ ಹಾಗೂ ದೇವರಿಗೆ ಜೀವಕಳೆ ತುಂಬಿದ ನಂತರ ಮಹಾಮಂಗಳಾರತಿ ನಡೆಯಲಿದೆ. ಸಂಜೆ 7.30ಕ್ಕೆ ಕಳಶದೊಂದಿಗೆ ಶ್ರೀದೇವಿಯ ದೇವಸ್ಥಾನ ಪ್ರವೇಶದೊಂದಿಗೆ ಪೂಜಾ ಕೈಂಕರ್ಯಗಳು ನಡೆಯಲಿವೆ.
ಮೇ 14ರಂದು ಬೆಳಗ್ಗೆ 6ಕ್ಕೆ ಬ್ರಾಹ್ಮೀ ಮಹೂರ್ತದಲ್ಲಿ ಗಾವಡಗೆರೆ ಮಠದ ನಟರಾಜ ಸ್ವಾಮೀಜಿ ಸಾನ್ನಿಧ್ಯದಲ್ಲಿ ದೇವಿಗೆ ರುದ್ರಾಭಿಷೇಕ, ಅರ್ಚನೆ, ಜೀವಕಳೆ ತುಂಬಲಾಗುತ್ತದೆ. ನಂತರ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗವಿರುತ್ತದೆ. ಈ ಎಲ್ಲಾ ಕಾರ್ಯಕ್ರಮಗಳು ಸಿದ್ಧಲಿಂಗಪುರದ ವೀರಭದ್ರೇಶ್ವರ ಫಾರಂನ ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಶಾಸಕ ಎಚ್.ಪಿ. ಮಂಜುನಾಥ್ ಭಾಗವಹಿಸುವರು.