ನೀರಿನ ಮಟ್ಟ ಕಾಯ್ದುಕೊಳ್ಳಿ: ಜಿಲ್ಲಾಧಿಕಾರಿ ಸಿ. ಶಿಖಾ
ಕ.ಪ್ರ.ವಾರ್ತೆ ಮೈಸೂರು ಮೇ 12-
ನಗರಕ್ಕೆ ನೀರು ಪೂರೈಸುವ ಕೆಆರ್ಎಸ್ ಅಣೆಕಟ್ಟಿನ ನೀರಿನ ಮಟ್ಟ ಕುಸಿದಿರುವುದರಿಂದ ಅಣೆಕಟ್ಟು ಹಾಗೂ ಹೊ ಗಳ್ಳಿ, ಬೆಳಗೊಳ, ಮೇಳಾಪುರ ಮೂಲ ಸ್ಥಾವರಕ್ಕೆ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಮೈಸೂರು ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಹೊಂಗಳ್ಳಿಯ ತುರ್ತು ಪಂಪ್ಸೆಟ್ಗಳನ್ನು ಪರಿಶೀಲಿಸಿ ಎಲ್ಲಾ ಪಂಪ್ಗಳಿಗೆ ನೀರೊದಗಿಸಲು ನದಿಯಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳಲು ನೀರಾವರಿ ನಿಗಮದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು.
ಬೆಳಗೊಳ ಪಂಪ್ಹೌಸ್ಗೆ ನೀರೊದಗಿಸುವ ದೇವರಾಯ ನಾಲೆಗೆ ನೀರು ಬರಲು ಸೇತಿ ಕಟ್ಟೆಯಲ್ಲಿರುವ ತೂಬುಗಳನ್ನು ಮುಚ್ಚಿರುವಂತೆ ಕಾಯ್ದುಕೊಳ್ಳುವುದು, ದೇವರಾಯ ನಾಲೆಯ ಉದ್ದಕ್ಕೆ ಇರುವ 18 ಸಂಖ್ಯೆಯ ಎಲ್ಲಾ ತೂಬುಗಳನ್ನು ನಗರಪಾಲಿಕೆಯ ಅಧಿಕಾರಿಗಳು ಪೊಲೀಸ್ ಇಲಾಖೆಯ ಸಹಾಯದೊಂದಿಗೆ ಮುಚ್ಚಿರುವಂತೆ ಕಾಯ್ದುಕೊಳ್ಳಲು ತಿಳಿಸಲಾಯಿತು. ಮೇಲಿನಂತೆ ಕ್ರಮ ಕೈಗೊಂಡಿರುವುದರಿಂದ ದೇವರಾಯ ನಾಲೆಯಲ್ಲಿ ಅವಶ್ಯಕತೆಗೆ ತಕ್ಕಂತೆ ನೀರನ್ನು ಪಡೆದು ಬೆಳಗೊಳ ಪಂಪ್ಹೌಸ್ನಿಂದ ಮೈಸೂರಿಗೆ 46 ಎಂಎಲ್ಡಿ ನೀರಿನ ಪೂರೈಕೆಯನ್ನು ಭಾನುವಾರದಿಂದ ಆರಂಭಿಸಲಾಯಿತು. ಮೇಳಾಪುರದಿಂದ ಮೈಸೂರಿಗೆ ನೀರು ಒದಗಿಸುವ ಮೂಲ ಸ್ಥಾವರದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ತಾತ್ಕಾಲಿಕವಾಗಿ ಹಾಕಿರುವ ಮರಳು ಮೂಟೆಯ ಅಣೆಕಟ್ಟನ್ನು ಪರಿಶೀಲಿಸಲಾಯಿತು. ಇದರಿಂದ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜಿಗೆ ಹೋಗುವ ನೀರಿನ ಪ್ರಮಾಣದಲ್ಲಿ ಯಾವುದೇ ಅಡಚಣೆಯಾಗಿರುವುದಿಲ್ಲ ಎಂದರು.
ಈಗಾಗಲೇ ಕುಡಿಯುವ ನೀರಿನ ಅಭಾವ ನೀಗಿಸಲು 25 ಟ್ಯಾಂಕರುಗಳ ಜತೆಗೆ ಹೆಚ್ಚುವರಿಯಾಗಿ 10 ಟ್ಯಾಂಕರ್ ಪಡೆಯಲಾಗಿದೆ. ಮೈಸೂರಿನ ವಿವಿಧ ಪ್ರದೇಶದಲ್ಲಿ ನೀರಿನ ಇಳುವರಿ ಕಡಿಮೆಯಾಗಿರುವ ಕೊಳವೆ ಬಾವಿಗಳನ್ನು ಚಾಲನೆಗೊಳಿಸಲು ಅವಶ್ಯಕವಾದ ಫ್ಲಷಿಂಗ್, ಆಳಗೊಳಿಸುವುದು ಕಾಮಗಾರಿಗಳನ್ನು ಅತಿ ತುರ್ತಾಗಿ ಕೈಗೊಂಡಿದ್ದು, ಈವರೆಗೆ 24 ಬೋರ್ವೆಲ್ಗಳನ್ನು ಸ್ವಚ್ಛಗೊಳಿಸಿ 14 ಸಂಖ್ಯೆಯ ಪೈಪ್ಗಳನ್ನು ಅಳವಡಿಸಲಾಗಿದೆ. ಉಳಿದಂತೆ 80 ಬೋರ್ವೆಲ್ಗಳ ಫ್ಲಷಿಂಗ್ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಸಿ. ಶಿಖಾ ತಿಳಿಸಿದರು. ಕುಡಿಯುವ ನೀರಿನ ಈ ಅಭಾವಕ್ಕೆ ನೈಸರ್ಗಿಕ ವೈಫಲ್ಯ ಕಾರಣವಾಗಿರುವುದರಿಂದ ನಾಗರಿಕರು ಮಿತವಾಗಿ ನೀರನ್ನು ಬಳಸಬೇಕೆಂದು, ನೀರಿನ ಸರಬರಾಜಿನ ಸಮಯದಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಂಡು ಜಿಲ್ಲಾಡಳಿತ ಹಾಗೂ ನಗರಪಾಲಿಕೆಯೊಡನೆ ಸಹಕರಿಸಬೇಕು ಎಂದು ಅವರು ಕೋರಿದರು.