ಸಿದ್ದರಾಮಯ್ಯ ಮನೆ ಎದುರು ಜನಜಂಗುಳಿ
ಕ.ಪ್ರ.ವಾರ್ತೆ ಮೈಸೂರು ಮೇ 12-
ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಮಕೃಷ್ಣನಗರದಲ್ಲಿರುವ ಮನೆ ಎದುರು ಭಾನುವಾರ ಮುಂಜಾನೆಯೆ ಜನಜಂಗುಳಿ ಇತ್ತು.
ಸೋಮವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸಿದ್ದರಾಮಯ್ಯ ಅವರಿಗೆ ಶುಭ ಕೋರಲು ನೂರಾರು ಮಂದಿ ಕಾರ್ಯಕರ್ತರು, ಅಭಿಮಾನಿಗಳು, ಪಕ್ಷದ ಮುಖಂಡರು ಮನೆ ಎದುರು ನೆರೆದಿದ್ದರು.
ಶನಿವಾರ ರಾತ್ರಿ ಮೈಸೂರಿಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರು ರಾಮಕೃಷ್ಣನಗರದಲ್ಲಿರುವ ತಮ್ಮ ಮನೆಯಲ್ಲಿ ಉಳಿದುಕೊಂಡಿದ್ದರು.
ಭಾನುವಾರ ಬೆಳಗ್ಗೆ 8.30ಕ್ಕೆ ಚಾಮುಂಡಿಬೆಟ್ಟಕ್ಕೆ ತೆರಳಲು ಹೊರ ಬಂದಾಗ ನೂರಾರು ಕಾರ್ಯಕರ್ತರು ಅವರನ್ನು ಮುತ್ತಿಕೊಂಡರು.
ಎಲ್ಲರನ್ನು ಆತ್ಮೀಯವಾಗಿ ಮಾತನಾಡಿಸಿದ ಸಿದ್ದರಾಮಯ್ಯ, ಹಲವರಿಂದ ಅಭಿನಂದನೆ ಸ್ವೀಕರಿಸಿದರು.
ಮನೆಯಿಂದ ಹೊರಟ ಬಳಿಕ ದಾರಿ ಮಧ್ಯೆ ಕೆ.ಜಿ. ಕೊಪ್ಪಲು, ಕುರುಬಾರಹಳ್ಳಿ, ತಾವರೆಕಟ್ಟೆ ಬಳಿ ತಮ್ಮ ಕಾರನ್ನು ನಿಲ್ಲಿಸಿ ಕಾರ್ಯಕರ್ತರನ್ನು ಮಾತನಾಡಿದರು. ಬಳಿಕ ಚಾಮುಂಡಿಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.