ಗಲಾಟೆ ಹಿಂದೆ ಜೆಡಿಎಸ್ ಚಿತಾವಣೆ: ಆರೋಪ
ಬೈಲಕುಪ್ಪೆ: ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ದಲಿತ ಸಮಾಜದವರು ಪ್ರತಿಭಟಿಸುವಂತೆ ಜೆಡಿಎಸ್ ಪ್ರೇರೇಪಿಸುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಐಲಾಪುರ ರಾಮು ಆರೋಪಿಸಿದ್ದಾರೆ. ಕಾಂಗ್ರೆಸ್ ಶಾಸಕರ ಅಭಿಪ್ರಾಯ ಹಾಗೂ ಗುಪ್ತ ಮತದಾನ ಮುಖಾಂತರ ಅಭಿಪ್ರಾಯ ಪಡೆದು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ ಹೊರತು, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅಥವಾ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾರಣರಲ್ಲ. 121 ಶಾಸಕರ ಅಭಿಪ್ರಾಯ ಸಂಗ್ರಹಿಸಿದಾಗ ಅತ್ಯಂತ ಹೆಚ್ಚಿನ ಮತಗಳು ಸಿದ್ದರಾಮಯ್ಯನವರಿಗೆ ಬಂದಿರುವುದರಿಂದ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಎಲ್ಲಾ ಜಾತಿಯವರಿಗೂ ಸಮಾನ ಅವಕಾಶ ಸಿಗಲಿದೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೈಕಮಂಡ್ ರೇಲ್ವೆ ಖಾತೆ ಕೊಡುವುದಾಗಿ ಘೋಷಣೆ ಮಾಡಿರುವುದು ಸ್ವಾಗತಾರ್ಹ ಎಂದು ತಿಳಿಸಿದರು. ತಾಪಂ ಸದಸ್ಯ ನವೀಲೂರು ಮಾದೇವ, ಗ್ರಾಪಂ ಅಧ್ಯಕ್ಷ ಮಾನು, ಬೈಲಕುಪ್ಪೆ ಡಾ.ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಅಣ್ಣಾಮಲೆ, ಪಿ. ಮಾದೇವ, ಕರಡಿಪುರದ ಕುಮಾರ, ಪಂಚವಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಈರಯ್ಯ, ರಾಧಕೃಷ್ಣ, ಬಿ. ಶಿವಣ್ಣ ಇದ್ದರು.