ಸಿಎಂ ಆದರು ಸಿದ್ದು, ಅಭಿಮಾನಿಗಳು ಹಂಚಿದರು ಲಡ್ಡು
ಟಿ. ನರಸೀಪುರ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ಹಿನ್ನೆಲೆ ತಾಲೂಕಿನ ಹೆಳವರಹುಂಡಿ ಗ್ರಾಮದಲ್ಲಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಸಾರ್ವಜನಿಕರಿಗೆ ಲಾಡು ವಿತರಿಸಿದರು. ಗ್ರಾಮದಲ್ಲಿ ಸೋಮವಾರ ಹಬ್ಬದ ಸಂಭ್ರಮ ಕಂಡು ಬಂದಿತು. ಗ್ರಾಮದ ಮುಖ್ಯ ರಸ್ತೆಯಲ್ಲಿ ಜಮಾವಣೆಗೊಂಡ ಗ್ರಾಮಸ್ಥರು ಹಾಗೂ ಅಭಿಮಾನಿಗಳು ವರುಣ ಕ್ಷೇತ್ರದ ನೆಚ್ಚಿನ ಶಾಸಕ ಸಿದ್ದರಾಮಯ್ಯ ಅವರು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದಕ್ಕೆ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಗ್ರಾಮದಲ್ಲಿರುವ ಮಲೆಮಹದೇಶ್ವರ ದೇವಾಲಯದಲ್ಲಿ ನೂತನ ಮುಖ್ಯಮಂತ್ರಿಗಳ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲದೆ, ಸಿದ್ದರಾಮಯ್ಯ ಅವರ ಬೃಹತ್ ಕಟೌಟ್‌ಗೆ ಹಾರ ತುರಾಯಿಗಳನ್ನು ಹಾಕಿ ಶುಭ ಕೋರಿದರು. ನಂತರ ಸಾರ್ವಜನಿಕರಿಗೆ ಮತ್ತು ಗ್ರಾಮಸ್ಥರಿಗೆ ಲಾಡು ವಿತರಿಸಿದರು. ಹಿರಿಯ ಕಾಂಗ್ರೆಸ್ ಮುಖಂಡ ಶಿವಪ್ರಸಾದ್, ಪಿ. ನಟರಾಜು ಮಾತನಾಡಿದರು. ಗ್ರಾಪಂ ಮಾಜಿ ಸದಸ್ಯ ಮೂರ್ತಿ, ಮುಖಂಡರಾದ ಗುರುಸ್ವಾಮಿ, ಕೆಂಪೇಗೌಡ, ಮಹದೇವು, ಎಚ್.ಎಸ್. ಶಿವಪ್ಪ, ಎಚ್.ಎಸ್. ಮಾದಯ್ಯ, ಚಿಕ್ಕನಂಜಯ್ಯ, ಪುಟ್ಟಸ್ವಾಮಿ, ಸಹದೇವ, ರೇವಣ್ಣ, ರಮೇಶ್, ಮಲ್ಲೇಶ್, ರಮೇಶ್, ಮರಿಸ್ವಾಮಿ, ಎಂ.ಕೆ. ಸಹದೇವ, ಕ್ರೇಜಿ ಸುರೇಶ್ ಸೇರಿದಂತೆ ನೂರಾರು ಮಂದಿ ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.