ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕ್ರಮ
ಮೈಸೂರು: ಇತ್ತೀಚೆಗೆ ಪ್ರಕಟಗೊಂಡ 2012- 13ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದ ಪಟ್ಟಿಯಲ್ಲಿ 20ನೇ ಸ್ಥಾನಕ್ಕೆ ಕುಸಿದಿರುವ ಜಿಲ್ಲೆಯನ್ನು ಮತ್ತೆ ಮುಂಚೂಣಿಗೆ ತರಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಕಾರ್ಯಪ್ರವೃತ್ತರಾಗಿದ್ದಾರೆ.
2011- 12ನೇ ಸಾಲಿನಲ್ಲಿ ಶೇ. 82.62 ರಷ್ಟು ಫಲಿತಾಂಶ ಪಡೆದು 12ನೇ ಸ್ಥಾನ ಅಲಂಕರಿಸಿದ್ದ ಜಿಲ್ಲೆ ಈ ಬಾರಿ ಶೇ. 81.05 ರಷ್ಟು ಫಲಿತಾಂಶ ಪಡೆದು 8 ಸ್ಥಾನಗಳ ಹಿನ್ನಡೆ ಸಾಧಿಸಿತು. ಒಂದರ್ಥದಲ್ಲಿ ಜಿಲ್ಲೆಯಲ್ಲಿ ಹೊಸದಾಗಿ ಪರೀಕ್ಷೆ ಬರೆದವರಲ್ಲಿ ಬಹುತೇಕ ಮಂದಿ ಪಾಸಾಗಿದ್ದಾರೆ. ಈ ವಿಭಾಗದ ಫಲಿತಾಂಶ ಸರಾಸರಿ ಕಾಯ್ದುಕೊಳ್ಳಲಾಗಿದ್ದರೂ ರಿಪೀಟರ್ಸ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಅನುತ್ತೀರ್ಣರಾಗಿದ್ದರಿಂದ 8 ಸ್ಥಾನ ಕುಸಿಯಲು ಕಾರಣ ಎಂದು ವಿಶ್ಲೇಷಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗಿದೆ. ಹೀಗಾಗಿ ಜಿಲ್ಲೆಯ 523 ಶಾಲೆಗಳಲ್ಲಿ 59 ಶಾಲೆಗಳಿಗೆ ಶೇ. 100, 393 ಶೇ. 80 ರಷ್ಟು, 125 ಶೇ. 60 ರಿಂದ 80, 47 ಶೇ. 40 ರಿಂದ 60 ಹಾಗೂ 18 ಶಾಲೆಗಳು ಶೇ. 40 ರಷ್ಟು ಫಲಿತಾಂಶ ಪಡೆದಿವೆ. ಅಂದರೆ ಶೇ. 11ರಷ್ಟು ಶಾಲೆಗಳು 60ಕ್ಕಿಂತ ಕಡಿಮೆ ಫಲಿತಾಂಶ ಪಡೆದಿವೆ.
ಒಟ್ಟಾರೆ ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರಕಿದೆ. ಸೋಲೇ ಗೆಲವಿನ ಮೆಟ್ಟಿಲು ಎಂಬಂತೆ ಆಗಿದ್ದಕ್ಕೆ ಚಿಂತಿಸದೆ ಮುಂದಿನ ದಿನಗಳಲ್ಲಿ ಮೈಸೂರನ್ನು ಮುಂಚೂಣಿಗೆ ಕೊಂಡೊಯ್ಯುವುದು ನಮ್ಮ ಧ್ಯೇಯವಾಗಿದೆ ಎಂದು ಡಿಡಿಪಿಐ ಬಿ.ಕೆ. ಬಸವರಾಜು ಕನ್ನಡಪ್ರಭಕ್ಕೆ ತಿಳಿಸಿದರು.
ಏನೇನು ಕ್ರಮ?
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ರಚಿಸಲಾಗಿದೆ. ಮೈಸೂರು ಮತ್ತು ಹುಣಸೂರು ಉಪವಿಭಾಗಗಳಿಗೆ ಶಿಕ್ಷಣಾಧಿಕಾರಿಗಳಾಗಿ ಡಾ.ಡಿ.ವಿ. ಕಾಂತ, ಮರಿಸ್ವಾಮಿ ಅವರನ್ನು ನೇಮಿಸಲಾಗಿದೆ. ಕಾಂತ ಅವರು ಮೈಸೂರು ಉತ್ತರ, ದಕ್ಷಿಣ, ಗ್ರಾಮಾಂತರ, ಟಿ. ನರಸೀಪುರ, ನಂಜನಗೂಡು ತಾಲೂಕುಗಳನ್ನು ಹಾಗೂ ಮರಿಸ್ವಾಮಿ ಅವರು ಹುಣಸೂರು, ಪಿರಿಯಾಪಟ್ಟಣ, ಕೆ.ಆರ್. ನಗರ, ಎಚ್.ಡಿ. ಕೋಟೆ ತಾಲೂಕುಗಳ ಬಿಇಒ ಜತೆ ಸಂಪರ್ಕದಲ್ಲಿದ್ದು, ಶೈಕ್ಷಣಿಕ ಪ್ರಗತಿ ಕಾಯ್ದುಕೊಳ್ಳುವರು. ಇವರಿಗೆ ತಾಲೂಕುಗಳ ನೋಡಲ್ ಅಧಿಕಾರಿಗಳು ಸಹರಿಸುವರು.
ಚರ್ಚಿಸಿ ಕ್ರಮ
ಪ್ರತಿ ಶಾಲೆಗಳ ವಿವರ ಪಡೆದು ಅಲ್ಲಿನ ಸಮಸ್ಯೆಗಳು, ಸೌಲಭ್ಯಗಳ ಕೊರತೆ, ಶಿಕ್ಷಕರ ಕೊರತೆ ಮುಂತಾದ ಮಾಹಿತಿ ಕ್ರೋಡೀಕರಿಸಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಲ್ಲಾ ಸೌಲಭ್ಯ ಒದಗಿಸುವುದು. ಆಯಾ ಶಾಲೆಗಳ ಮುಖ್ಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದು. ತರಗತಿಯ ಆರಂಭದ ದಿನಗಳಿಂದಲೇ ಮಕ್ಕಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗುವಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ.
ಪೋಷಕರ ಪಾತ್ರವೇನು?
ಜಿಲ್ಲೆಯು ಮುಂಚೂಣಿಗೆ ಬರಲು ಕೇವಲ ಶಿಕ್ಷಕರ ಪಾತ್ರವಲ್ಲ, ಪೋಷಕರು ಸಹಕರಿಸಬೇಕಿದೆ. ಮಕ್ಕಳು ಶಾಲೆಯಿಂದ ಬಂದ ತಕ್ಷಣ ಅವರಿಗೆ ಒತ್ತಡ ಹೇರದೆ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಿ ಉತ್ತೇಜನ ನೀಡುವುದು. ವಿದ್ಯಾಭ್ಯಾಸದ ಬಗ್ಗೆ ಗಂಭೀರತೆ ಬೆಳೆಸಿ ಗುರಿಯೆಡೆಗೆ ಸಾಗುವಂತೆ ಮಕ್ಕಳನ್ನು ಪ್ರೋತ್ಸಾಹಿಸುವಲ್ಲಿ ಪೋಷಕರ ಗಮನಾರ್ಹ ಪಾತ್ರ ವಹಿಸಬೇಕಿದೆ.
ಮಿಂಚಿನ ಸಂಚಾರ
ಶಾಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ಸರಿಯಾಗಿ ನಡೆಯುತ್ತಿವೆಯೋ, ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಕಳೆದ ವರ್ಷ ಮಿಂಚಿನ ಸಂಚಾರ ತಂಡ ರಚಿಸಲಾಗಿತ್ತು. ಇವರು ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲಿಸುತ್ತಿದ್ದರು. ಈ ಸಾಲಿನಿಂದ ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಸೂಚಿಸಲಾಗಿದೆ.
ಈ ಬಾರಿಯ ಸಾಧನೆ
ಪರೀಕ್ಷೆಗೆ ಕುಳಿತಿದ್ದವರಲ್ಲಿ ಗ್ರಾಮಾಂತರ ಪ್ರದೇಶದ ಶೇ. 77.4 ಬಾಲಕರು ಮತ್ತು ಶೇ. 83.64 ಬಾಲಕಿಯರು, ನಗರ ಪ್ರದೇಶದ ಶೇ. 78.69 ಬಾಲಕರು, ಶೇ. 84.87 ಬಾಲಕಿಯರು ಪಾಸಾಗಿದ್ದಾರೆ. ಎಸ್ಸಿ ವಿಭಾಗ ಶೇ. 72.54 ಬಾಲಕರು, ಶೇ. 78.28 ಬಾಲಕಿಯರು, ಎಸ್ಟಿ ವಿಭಾಗದ ಶೇ. 72.78 ಬಾಲಕರು, ಶೇ. 79.86 ಬಾಲಕಿಯರು, ಪ್ರವರ್ಗ-1ರ ಶೇ. 76.16 ಬಾಲಕರು, ಶೇ. 79.86 ಬಾಲಕಿಯರು, ಇತರೆ ಶೇ. 80.85 ಬಾಲಕರು, 88.25 ಬಾಲಕಿಯರು, ಅಲ್ಪಸಂಖ್ಯಾತರಲ್ಲಿ ಶೇ. 76.81 ಬಾಲಕರು, ಶೇ. 79.19 ಬಾಲಕಿಯರು ಉತ್ತೀರ್ಣರಾಗಿದ್ದಾರೆ.
ತಾಲೂಕುವಾರು ಸಾಧನೆ
ತಾಲೂಕು ಪರೀಕ್ಷೆಗೆ ಕುಳಿತವರು ಪಾಸಾದವರು ಶೇಕಡವಾರು
ಪಿರಿಯಾಪಟ್ಟಣ 3024 2600 85.98
ಎಚ್.ಡಿ. ಕೋಟೆ 3314 2796 84.37
ಕೆ.ಆರ್. ನಗರ 3360 2832 84.29
ಮೈಸೂರು ಉತ್ತರ 7142 5892 82.50
ಮೈಸೂರು ದಕ್ಷಿಣ 5754 4716 81.96
ಹುಣಸೂರು 4012 3253 81.08
ಮೈಸೂರು ಗ್ರಾಮಾಂತರ 4364 3535 81
ಟಿ. ನರಸೀಪುರ 3477 2805 80
ನಂಜನಗೂಡು 4727 3324 70.32
ಒಟ್ಟು 39174 31753 81.05
- ಜೆ. ಮಹದೇವ