ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ತಾಂತ್ರಿಕ ಹುದ್ದೆಗೂ ಸ್ಪರ್ಧಾತ್ಮಕ ಪರೀಕ್ಷೆ

Vishwanath S
Updated On : 15 May 2013, 12:01 pm

ಮೈಸೂರು: ತಾಂತ್ರಿಕ ಹುದ್ದೆಗಳಿಗೂ ಸ್ವರ್ಧಾತ್ಮಕ ಪರೀಕ್ಷೆಗಳ ಮೂಲಕವೇ ಆಯ್ಕೆ ಮಾಡಲು ನಾಗರಿಕ ಸೇವಾ ನಿಯಮಗಳಿಗೆ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯವು ಮಾ. 12 ರಂದು ಹೊರಡಿಸಿರುವ ಅಧಿಸೂಚನೆಯು ಏ.11ರ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟವಾಗಿದೆ.
'ತಾಂತ್ರಿಕ ಹುದ್ದೆಗೂ ಸ್ಪರ್ಧಾತ್ಮಕ ಪರೀಕ್ಷೆ ಯಾವಾಗ?' ಎಂಬ ಶೀರ್ಷಿಕೆಯಡಿ ಜ. 7ರಂದು ಕನ್ನಡಪ್ರಭದಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ತಾಂತ್ರಿಕ ಹುದ್ದೆಗಳಿಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ಆಯ್ಕೆ ಮಾಡಲು ನಾಗರಿಕ ಸೇವಾ ನಿಯಮಗಳಿಗೆ ತಿದ್ದುಪಡಿ ಮಾಡಿ ಎಂದು ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆ ಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಧೂಳು ತಿನ್ನುತ್ತಿತ್ತು.
ಕರ್ನಾಟಕ ನಾಗರಿಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಹಾಗೂ ಆಯ್ಕೆ) (ಸಾಮಾನ್ಯ) ನಿಯಮಗಳು 2006 ರನ್ವಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು. ಈ ನಿಯಮಗಳಲ್ಲಿ ತಾಂತ್ರಿಕ ಹುದ್ದೆಗಳಿಗೆ ಅಭ್ಯರ್ಥಿಗಳು ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿರುವ ಒಟ್ಟು ಶೇಕಡವಾರು ಅಂಕಗಳ ಜೇಷ್ಠತೆಯನುಸಾರ ಸಂದರ್ಶನಕ್ಕೆ ಅರ್ಹರಾಗಿ, ನಂತರ ಈ ಶೇಕಡವಾರು ಅಂಕಗಳಿಗೆ ಸಂದರ್ಶನದ ಅಂಕ ಸೇರಿಸಿ, ಇದರ ಜೇಷ್ಠತೆಯನುಸಾರ ಆಯ್ಕೆ ಮಾಡಲಾಗುತ್ತಿತ್ತು.
ಕೆಲವು ಹುದ್ದೆಗಳಿಗೆ ಸ್ನಾತಕೋತ್ತರ ಪದವಿ ನಿಗದಿಪಡಿಸಲಾಗಿದೆ. ಸ್ನಾತಕೋತ್ತರ ಪದವಿಯನ್ನು ಕೆಲವು ಅಭ್ಯರ್ಥಿಗಳು ನಾನ್‌ಸೆಮಿಸ್ಟರ್ ಪದ್ಧತಿಯಲ್ಲಿ, ಮತ್ತೆ ಕೆಲವರು ಸೆಮಿಸ್ಟರ್ ಪದ್ಧತಿಯಲ್ಲಿ ಪಡೆದಿರುತ್ತಾರೆ. ಸೆಮಿಸ್ಟರ್ ಪದ್ಧತಿಯ ಅಭ್ಯರ್ಥಿಗಳು ನಾನ್‌ಸೆಮಿಸ್ಟರ್ ಪದ್ಧತಿಯ ಅಭ್ಯರ್ಥಿಗಳಿಗಿಂತ ಹೆಚ್ಚು ಅಂಕಗಳನ್ನು ಪಡೆದಿರುತ್ತಾರೆ. ಇದರಿಂದ ನಾನ್‌ಸೆಮಿಸ್ಟರ್ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಅರ್ಹತೆ ಪಡೆಯಲು ಅವಕಾಶವಾಗುತ್ತಿರಲಿಲ್ಲ. ಅವಕಾಶ ಸಿಕ್ಕರೂ ಆಯ್ಕೆಯಾಗುವ ಸಾಧ್ಯತೆ ಕಡಿಮೆ ಇತ್ತು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ನೇಮಕಾತಿಗೆ ಹಿಂದೆ 2006ರ ನಿಯಮ ಪಾಲಿಸಲಾಗಿದ್ದು, ನಾನ್ ಸೆಮಿಸ್ಟರ್ ಅಭ್ಯರ್ಥಿಗಳು ಸಂದರ್ಶನಕ್ಕೆ ಅರ್ಹತೆಯನ್ನೇ ಹೊಂದಿರುವುದಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಪದವಿಪೂರ್ವ ಶಿಕ್ಷಣ ಇಲಾಖೆಯು ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿ, ನೇಮಕಾತಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮುಖಾಂತರ ಮಾಡುತ್ತಿದೆ. ಇದರಿಂದ ಎಲ್ಲಾ ಅಭ್ಯರ್ಥಿಗಳಿಗೂ (ಸೆಮಿಸ್ಟರ್ ಮತ್ತು ನಾನ್ ಸೆಮಿಸ್ಟರ್) ಸಮಾನ ಅವಕಾಶ ದೊರಕಿದೆ.
ಪ್ರಸ್ತಾವನೆ: ಅದೇ ರೀತಿ ತಾಂತ್ರಿಕ ಹುದ್ದೆಗಳಿಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ಆಯ್ಕೆ ಮಾಡಬೇಕು ಎಂದು ಕೆಪಿಎಸ್ಸಿ 2009ರ ಆ. 10 ರಂದು ನಡೆದ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಿ, ಅದರಂತೆ ಅದೇ ವರ್ಷದ ಸೆ. 2ರಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಹಲವಾರು ಬಾರಿ ನೆನಪೋಲೆಗಳನ್ನು ಸಹ ಕಳುಹಿಸಿತ್ತು.
ಕೋರಿಕೆ: ಕೆಪಿಎಸ್ಸಿ ಅಧ್ಯಕ್ಷ ಗೋನಾಳ್ ಭೀಮಪ್ಪ ಅವರು, ಕಳೆದ ಡಿ. 1ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರಿಗೆ ಮತ್ತೊಮ್ಮೆ ಪತ್ರ ಬರೆದು, ತಾಂತ್ರಿಕ ಹುದ್ದೆಗಳಿಗೂ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ನಂತರ ಸಂದರ್ಶನ ಮುಖಾಂತರ ಆಯ್ಕೆ ಮಾಡುವ ಪದ್ಧತಿ ಜಾರಿಗೊಳಿಸಲು ಕರ್ನಾಟಕ ನಾಗರಿಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಹಾಗೂ ಆಯ್ಕೆ) (ಸಾಮಾನ್ಯ) ನಿಯಮಗಳು 2006ರ ನಿಯಮಗಳಿಗೆ ಸೂಕ್ತ ತಿದ್ದುಪಡಿ ಹೊರಡಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶ ನೀಡುವಂತೆ ಕೋರಿದ್ದರು.
ಈ ಪತ್ರವನ್ನು ಸ್ವೀಕರಿಸಿರುವ ಮುಖ್ಯ ಕಾರ್ಯದರ್ಶಿಗಳು ಈ ಕಡತ ಮಂಡಿಸಿ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಸೂಚಿಸಿದ್ದರು.
ಇಲಾಖೆ ಮೀನಮೇಷ ಎಣಿಸುತ್ತಾ ಕಾಲದೂಡುತ್ತಿತ್ತು. ಪರಿಣಾಮ ಲಕ್ಷಾಂತರ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತಿತ್ತು. ದೇಶದ ಯಾವುದೇ ರಾಜ್ಯದಲ್ಲಿ ಇಲ್ಲದ ನೇಮಕಾತಿ ನಿಯಮಗಳು ನಮ್ಮ ರಾಜ್ಯದಲ್ಲಿವೆ. ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ ವಿಭಿನ್ನ ಮಾನದಂಡ ಅನುಸರಿಸಲಾಗುತ್ತಿದೆ. ಎಲ್ಲಾ ಪದವೀಧರರಿಗೂ ಸಮಾನ ಅವಕಾಶಗಳು ಸಿಗುತ್ತಿಲ್ಲ. ಇದರಿಂದ ಸಂವಿಧಾನಬದ್ಧವಾದ ಸಮಾನತೆಯ ಹಕ್ಕನ್ನು ನಿರಾಕರಿಸಿದಂತೆ ಆಗುತ್ತಿದೆ. ತಾಂತ್ರಿಕ ಹುದ್ದೆಗಳು ಅನ್ಯ ರಾಜ್ಯದವರ ಪಾಲಾಗುತ್ತಿವೆ ಎಂಬುದು ಶ್ರೀರಂಗಪಟ್ಟಣದ ಸಾಯಿಶಂಕರ್ ಅವರ ವಾದವಾಗಿತ್ತು.
- ಯಾವ್ಯಾವ ಹುದ್ದೆಗಳು ಬರುತ್ತವೆ?
ತಾಂತ್ರಿಕ ಹುದ್ದೆಗಳು ಎಂದರೇ, ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಇಲಾಖೆ ಎಂಜಿನಿಯರ್‌ಗಳು, ಪಾಲಿಟೆಕ್ನಿಕ್, ಪದವಿ ಕಾಲೇಜುಗಳು ಉಪನ್ಯಾಸಕರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಬ್ರೇಕ್ ಇನ್ಸ್‌ಪೆಕ್ಟರ್‌ಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಹಾಗೂ ಐಟಿಐ ಕಾಲೇಜುಗಳ ಪ್ರಾಂಶುಪಾಲರು,  ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್‌ಗಳು
- ಕೆಪಿಟಿಸಿಎಲ್‌ನಲ್ಲಿ ಬದಲಾವಣೆ
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲೂ ಇದೇ ರೀತಿಯಾಗಿತ್ತು. ಕರ್ನಾಟಕ ವಿದ್ಯುತ್ ನಿಗಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ ನಡೆಯುತ್ತಿದ್ದರೆ ಕೆಪಿಟಿಸಿಎಲ್ ನೇರ ನೇಮಕಾತಿ ಮಾಡಿಕೊಳ್ಳುತ್ತಿತ್ತು. ಕನ್ನಡಪ್ರಭದಲ್ಲಿ ಈ ಸಂಬಂಧ ವಿಶೇಷ ವರದಿ ಪ್ರಕಟವಾದ ನಂತರ ಕೆಪಿಟಿಸಿಎಲ್ ಕೂಡ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ, ಸಾಮರ್ಥ್ಯ ಪರೀಕ್ಷೆ ನಿಗದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
- ಕನ್ನಡಪ್ರಭಕ್ಕೆ ಕೃತಜ್ಞತೆ
ರಾಜ್ಯದಲ್ಲಿ ಪ್ರತಿಭಾವಂತ ತಾಂತ್ರಿಕ ಪದವೀಧರರಿಗೆ ಆಗುತ್ತಿದ್ದ ತೊಂದರೆಗಳ ಬಗ್ಗೆ ವರದಿ ಮಾಡಿ, ಸರ್ಕಾರದ ಗಮನ ಸೆಳೆದು, ನೇಮಕಾತಿ ನಿಯಮಗಳ ತಿದ್ದುಪಡಿಗೆ ಕಾರಣವಾದ ಕನ್ನಡಪ್ರಭಕ್ಕೆ ಶ್ರೀರಂಗಪಟ್ಟಣದ ಮಾಹಿತಿ ಹಕ್ಕು ಹೋರಾಟಗಾರ ಸಾಯಿಶಂಕರ್ ಕೃತಜ್ಞತೆ ಸಲ್ಲಿಸಿದ್ದಾರೆ.
- ಅಧಿಸೂಚನೆಗೆ ತಡೆ
ಅಭ್ಯರ್ಥಿಗಳನ್ನು ಕೇವಲ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಬಾರದು. ಸಾಮರ್ಥ್ಯ ಪರೀಕ್ಷೆ ಪರಿಗಣಿಸಬೇಕು ಎಂದು ಕೋರಿ ಶಿವಮೊಗ್ಗದ ವಿಜಯಕುಮಾರ್ ಅವರು ರಾಜ್ಯ ಹೈಕೋರ್ಟ್ ಮೊರೆ ಹೋಗಿದ್ದರು. ಕೆಪಿಎಸ್ಸಿಯು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು 2012ರ ನ. 22ರಂದು ಹೊರಡಿಸಿದ್ದ ಅಧಿಸೂಚನೆಗೆ ರಾಜ್ಯ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಇದರಿಂದ ಲೋಕೋಪಯೋಗಿ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯ ಗ್ರೂಪ್ ಬಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ.

-ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement