ಸೆಸ್ಕ್ ಕಚೇರಿ ಎದುರು ಗುತ್ತಿಗೆದಾರರ ಪ್ರತಿಭಟನೆ
ಕ.ಪ್ರ.ವಾರ್ತೆ , ಹುಣಸೂರು , ಮೇ 14
ಪಟ್ಟಣದಲ್ಲಿ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯಲು ಹೊಸ ಸಾಫ್ಟ್ವೇರ್ ಅಳವಡಿಸುವ ಜವಾಬ್ದಾರಿ ಹೊತ್ತಿರುವ ಇನ್ಫೋಸಿಸ್ ಕಂಪನಿಗೆ ನೀಡಿರುವ ಒಪ್ಪಂದ ರದ್ದುಪಡಿಸಬೇಕೆಂದು ಆಗ್ರಹಿಸಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಸೆಸ್ಕ್ ಎಇಇ ಕಚೇರಿ ಎದುರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.
ಕೇಂದ್ರ ಸರ್ಕಾರ ಆರ್ಎಪಿ ಡಿಎಪಿ ಯೋಜನೆಯಡಿ ಹೊಸ ಸಂಪರ್ಕ ಪಡೆಯಲು ಎಲ್ಲ ಪ್ರಕ್ರಿಯೆ ಕಂಪ್ಯೂಟರಿಕರಣಗೊಳಿಸುವ ಮೂಲಕ ಹೊಸ ವ್ಯವಸ್ಥೆ ಜಾರಿಗೆ ತಂದಿದೆ. ಇದನ್ನು ಅನುಷ್ಠಾನಕ್ಕೆ ಜಾರಿ ತರಲು ಹೊಸ ಸಾಫ್ಟ್ವೇರ್ ಅಳವಡಿಸುವ ಜವಾಬ್ದಾರಿಯನ್ನು ಇನ್ಫೋಸಿಸ್ ಕಂಪನಿಗೆ ನೀಡಿದ್ದು, ಈ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದ್ದು, ಗ್ರಾಹಕರು ಪರದಾಡುತ್ತಿದ್ದಾರೆ.
ಸೆಸ್ಕ್ ಅಧಿಕಾರಿಗಳೂ ದಿವ್ಯ ಮೌನ ವಹಿಸಿದ್ದಾರೆ ಎಂದು ಸಂಘದ ಅಧ್ಯಕ್ಷ ಕುಪ್ಪರಾಜು ಆರೋಪಿಸಿ. ತಕ್ಷಣವೇ ಇನ್ಫೋಸಿಸ್ ಕಂಪನಿಗೆ ನೀಡಿರುವ ಗುತ್ತಿಗೆ ರದ್ದುಗೊಳಿಸಿ ಈ ಹಿಂದಿನ ವ್ಯವಸ್ಥೆ ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಸಂಘದ ಕಾರ್ಯದರ್ಶಿ ಕೆ. ವೃಷಬೇಂದ್ರ ಮಾತನಾಡಿದರು. ಸ್ಥಳಕ್ಕೆ ಸೆಸ್ಕ್ ಎಇಇ ಚನ್ನಕೇಶವ ಭೇಟಿ ನೀಡಿ ಗುತ್ತಿಗೆದಾರರಲ್ಲಿ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟರಾದರು, ಗುತ್ತಿಗೆದಾರರು ಒಪ್ಪದೆ ಧರಣಿ ಮುಂದುವರಿಸಿದರು. ಪ್ರತಿಭಟನೆಯಲ್ಲಿ ಗುತ್ತಿಗೆದಾರರಾದ ನಾಗೇಶ್, ನವೀನ್ರಾಜ್ ಅರಸ್, ಕಾಂತರಾಜ್, ಶೇಖರ್, ಮಹಮದ್ ಜಮೀಲ್, ಅಕ್ಮಲ್, ನಾಗರಾಜ್ ಭಾಗವಹಿಸಿದ್ದರು.
ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಬೇಕು: ಚನ್ನಕೇಶವ
ಕೇಂದ್ರ ಸರ್ಕಾರ ವಿದ್ಯುತ್ ಪೋಲು ತಪ್ಪಿಸುವ ಸಲುವಾಗಿ ರಾಜ್ಯದ ಹದಿನೇಳು ಉಪವಿಭಾಗ ಕೇಂದ್ರಗಳಲ್ಲಿ ಇಡೀ ವ್ಯವಸ್ಥೆಯನ್ನು ಆಧುನೀಕರಣಗೊಳಿಸಿದೆ. ಪಟ್ಟಣದಲ್ಲಿ ಹೊಸದಾಗಿ ಸಂಪರ್ಕ ಪಡೆಯಬೇಕಾದಲ್ಲಿ ಎಲ್ಲ ಪ್ರಕ್ರಿಯೆಯನ್ನು ಕಂಪ್ಯೂಟರೀಕರಣಗೊಳಿಸುವ ಉದ್ದೇಶದಿಂದ ರಾಜ್ಯದೆಲ್ಲೆಡೆ ಇನ್ಫೋಸಿಸ್ ಕಂಪನಿಗೆ ವಹಿಸಿದೆ ಎಂದು ಎಇಇ ಸೆಸ್ಕ್ ವಿ.ಪಿ. ಚನ್ನಕೇಶವ ತಿಳಿಸಿದ್ದಾರೆ. ಹೊಸ ವ್ಯವಸ್ಥೆ ಅನುಷ್ಠಾನಗೊಳ್ಳುವಾಗ ತಡವಾಗುವುದು ಸಹಜ. ಇದನ್ನು ದೊಡ್ಡದು ಮಾಡದೇ ಸೆಸ್ಕ್ ಗುತ್ತಿಗೆದಾರರು ಸಹಕರಿಸಬೇಕು. ಇಲ್ಲಿ ಕೇವಲ 41 ಹೊಸ ಸಂಪರ್ಕ ನೀಡುವುದು ಬಾಕಿ ಇದೆಯಷ್ಟೆ. ಈಗಾಗಲೇ ಇನ್ಫೋಸಿಸ್ ಕಂಪನಿಯವರು ಸ್ಥಳದಲ್ಲಿ ಠಿಕಾಣಿ ಹೂಡಿದ್ದು, ಕಂಪ್ಯೂಟರೀಕರಣ ಗೊಳಿಸುವ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡುತ್ತಿದ್ದಾರೆ ಎಂದರು.