ಹಾಲಿಗೆ ಪ್ರೋತ್ಸಾಹಧನ: ಸಿಎಂಗೆ ಅಭಿನಂದನೆ
ಮೈಸೂರು: ರಾಜ್ಯದಲ್ಲಿನ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 4 ಪ್ರೋತ್ಸಾಹಧನ ಘೋಷಿಸಿರುವ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಮಹಾಮಂಡಳ ಅಭಿನಂದಿಸಿದೆ.
ಕಳೆದ ಒಂದು ವರ್ಷದಿಂದ ರಾಜ್ಯಾದ್ಯಂತ ಮಳೆಯಿಲ್ಲದೆ ಕೃಷಿ ಬಿಟ್ಟು ಕೂಲಿಗಾಗಿ ಪಟ್ಟಣದ ಕಡೆ ಮುಖ ಮಾಡಿದ್ದರು. ಇತ್ತ ಹೈನುಗಾರಿಕೆ ಮಾಡಲು ಉತ್ಪಾದನಾ ವೆಚ್ಚ ಜಾಸ್ತಿಯಾಗಿದ್ದು ಸಹ ಊರು ಬಿಡಲು ಕಾರಣವಾಗಿತ್ತು. ಇದನ್ನರಿತಿದ್ದ ಹಿಂದಿನ ಸರ್ಕಾರ ಪ್ರತಿ ಲೀಟರ್ ಹಾಲಿಗೆ 2 ಪ್ರೋತ್ಸಾಹಧನ ನೀಡಿತ್ತಾದರು ಅದು ಸಾಲುತ್ತಿರಲಿಲ್ಲ. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದ ತತ್‌ಕ್ಷಣದಲ್ಲೇ ಪ್ರೋತ್ಸಾಹಧನ ಹೆಚ್ಚಿಸಿರುವುದು ರೈತರ ಪಾಲಿಗೆ ಮರಳುಗಾಡಿನಲ್ಲಿ ನೀರು ಸಿಕ್ಕಿದಂತಾಗಿದೆ ಎಂದು ಪದಾಧಿಕಾರಿಗಳಾದ ಎಸ್. ಶಿವನಾಗಪ್ಪ, ರಮೇಶ್, ಟಿ.ಎ. ಸುಬ್ಬರಾವ್, ದಯಾನಂದ್ ರಾವ್, ತಾರಾ ನಂಜುಂಡಸ್ವಾಮಿ ಶ್ಲಾಘಿಸಿದ್ದಾರೆ.
ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕೆಲಸ ಮಾಡುವ ನೌಕರನೂ ಹಾಲು ಉತ್ಪಾದಕರ ಮಕ್ಕಳೇ ಆಗಿರುವುದರಿಂದ ಅವರಿಗೆ ಉದ್ಯೋಗ ಭದ್ರತೆ ಜತೆಗೆ ಪ್ರತಿ ಲೀಟರ್ ಹಾಲಿಗೆ 1 ಕಮಿಷನ್ ನೀಡುವಂತೆ ಅವರು ಒತ್ತಾಯಿಸಿದ್ದಾರೆ.