ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

25ರಂದು ಕಬ್ಬು ಬೆಳೆಗಾರರ ರಾಷ್ಟ್ರೀಯ ಸಮಾವೇಶ

Vishwanath S
Updated On : 15 May 2013, 11:57 am

ಕ.ಪ್ರ.ವಾರ್ತೆ ,  ಮೈಸೂರು ,  ಮೇ 15
ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಂಯುಕ್ತಾಶ್ರಯದಲ್ಲಿ ಮೇ 25ರಂದು ಬೆಂಗಳೂರಿನ ಪುರಭವನದಲ್ಲಿ ಕಬ್ಬು ಬೆಳೆಗಾರ ರೈತರ
ರಾಷ್ಟ್ರೀಯ ಸಮಾವೇಶ ಆಯೋಜಿಸಲಾಗಿದೆ.
ಅಂದಿನ ಸಮಾವೇಶದಲ್ಲಿ ಪ್ರಧಾನಮಂತ್ರಿಗಳ ಆರ್ಥಿಕ ಸಲಹೆಗಾರ ಡಾ.ಆರ್. ರಂಗರಾಜನ್, ಕೇಂದ್ರ ಸಚಿವರು, ರಾಜ್ಯ ಸಚಿವರು ಭಾಗವಹಿಸುವರು. ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕಬ್ಬು ಬೆಳೆಗಾರರು ಆಗಮಿಸುವರು. ಕಬ್ಬು ದರ ನಿಗದಿ ಮಾಡುವಾಗ ಎಂ.ಎಸ್. ಸ್ವಾಮಿನಾಥನ್ ವರದಿಯಂತೆ ಉತ್ಪಾದನಾ ವೆಚ್ಚದ ಅರ್ಧಭಾಗ ಸೇರಿಸಿ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಲಾಗುವುದು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಕ್ಕರೆ ವಲಯವನ್ನು ಮುಕ್ತಗೊಳಿಸಿದ ಕಾರಣ ಕಬ್ಬು ಬೆಳೆಯುವ ಪ್ರದೇಶಗಳು ಕಡಿಮೆಯಾಗುತ್ತಿವೆ. ಹಾಗಾಗಿ 2012- 13ನೇ ಸಾಲಿನಲ್ಲಿ ಶೇ. 70 ರಷ್ಟು ಕಬ್ಬು ಬೆಳೆಯಲಾಗಿದೆ. ಅಂದರೆ, ಶೇ. 30 ರಷ್ಟು ಕಬ್ಬು ಉತ್ಪಾದನೆ ಕುಂಠಿತವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಕಳೆದ ಬಾರಿ 3.20 ಕೋಟಿ ಟನ್ ಕಬ್ಬು ಅರೆಯಲಾಗಿದೆ. ಇದಕ್ಕೆ ಅಸಮರ್ಪಕ ವಿದ್ಯುತ್ ಪೂರೈಕೆ, ಮಳೆ ಕೈ ಕೊಟ್ಟಿದ್ದು ಮುಖ್ಯ ಕಾರಣ ಎಂದರು.
ಸಿಎಂಗೆ ಅಭಿನಂದನೆ: ಹೈನುಗಾರರ ಸಂಕಷ್ಟ ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 4 ಪ್ರೋತ್ಸಾಹಧನ ನೀಡಿರುವುದು ಸ್ವಾಗತಾರ್ಹ. ಈ ನಿರ್ಧಾರ ತೆಗೆದುಕೊಂಡ ಅವರನ್ನು ಅಭಿನಂದಿಸುತ್ತೇವೆ. ಹಾಗೆ ನಮ್ಮ ಸಮಾವೇಶಕ್ಕೆ ಆಗಮಿಸುವಂತೆ ಸ್ವಾಗತಿಸುತ್ತೇವೆ ಎಂದು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಲಿಂಗೇಗೌಡ ಇದ್ದರು.
ಹಕ್ಕೊತ್ತಾಯಗಳು
1. ಕಬ್ಬು ದರ ನಿಗದಿ ಮಾಡುವಾಗ ರೈತರ ಜಮೀನಿನಲ್ಲಿ ದರ ಎಂದು ನಿಗದಿಪಡಿಸಬೇಕು.
2. ಕಬ್ಬಿಗೆ ಬೆಳೆ ವಿಮೆ ಜಾರಿ ಮಾಡಿ, ರೈತರ ಜತೆ ಕಬ್ಬು ಖರೀದಿಸಲು ಒಪ್ಪಂದ ಮಾಡಿಕೊಂಡ ಕಾರ್ಖಾನೆಗಳೆ ವಿಮಾ ಕಂತು ಪಾವತಿಸಬೇಕು.
3. ಹೊಸ ಸಂಶೋಧನೆಗಳ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಬರುವ ಕಬ್ಬು ತಳಿಗಳನ್ನು ಕಂಡುಹಿಡಿದು ರೈತರು ಬೆಳೆಯಲು ಉತ್ತೇಜಿಸಬೇಕು.
4. ಕಡಿಮೆ ವೆಚ್ಚದ ಬೇಸಾಯದಲ್ಲಿ ಕಬ್ಬು ಬೆಳೆಯುವ ಒಂಟಿ ಕಣ್ಣಿನ ಬೇಸಾಯ, ಹನಿ ನೀರಾವರಿ ಯೋಜನೆ ಅಳವಡಿಸಿಕೊಳ್ಳಲು ಕಾರ್ಖಾನೆಗಳು ರೈತರಿಗೆ ಪ್ರೋತ್ಸಾಹಿಸಬೇಕು.
5. ನೂತನ ಕಾರ್ಖಾನೆಗಳ ಆರಂಭಕ್ಕೆ 15 ಕಿಮೀ ವ್ಯಾಪ್ತಿಯನ್ನು ರದ್ದುಪಡಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement