ವಿನ್ಯಾಸಗೊಳಿಸಿದ ನೀರು ಕುರಿತ ಕಾರ್ಯಾಗಾರ
ಕ.ಪ್ರ.ವಾರ್ತೆ , ಮೈಸೂರು , ಮೇ 15
ಮೈಸೂರಿನ ವಿಡಬ್ಲ್ಯೂಎಫ್ ಇಂಡಸ್ಟ್ರೀಸ್, ಅಮೆರಿಕಾದ ಗ್ರೀನ್ಫೀಲ್ಡ್ ನ್ಯಾಚುರಲ್ಸ್ ಹಾಗೂ ಬಾನುಲಿ ಕೃಷಿಕರ ಉತ್ಪಾದಕರ ಕಂಪನಿ ಸಂಯುಕ್ತವಾಗಿ ವಿನ್ಯಾಸಗೊಳಿಸಿದ ನೀರು ಕುರಿತು ರೋಟರಿ ಕೇಂದ್ರದಲ್ಲಿ ಬುಧವಾರ ಸಂಜೆ ಕಾರ್ಯಾಗಾರ ಆಯೋಜಿಸಿತ್ತು.
ಗ್ರೀನ್ಫೀಲ್ಡ್ ಅಂತಾರಾಷ್ಟ್ರೀಯ ಕಾರ್ಯಾಚರಣೆ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ನಿರ್ದೇಶಕ ಜೆಫ್ರಿ ರೆಗ್ಗಿನ್ಸ್ ಮಾತನಾಡಿ, ವಿನ್ಯಾಸಗೊಳಿಸಿದ ನೀರು ಜೀವಧಾರಕ ಗುಣ ಹಾಗೂ ನೀರಿನ ಪ್ರಮುಖ ಪೋಷಕಾರಕ ಹೊಂದಿದೆ. ಈ ನೀರಿನ ಬಳಕೆಯಿಂದ ಉತ್ತಮ ಆರೋಗ್ಯ, ಅಧಿಕ ಉತ್ಪಾದನೆ ಪಡೆಯಬಹುದು. ಗಿಡ, ಪ್ರಾಣಿಗಳು, ಮಣ್ಣಿನ ಹಾಗೂ ಜನರ ಆರೋಗ್ಯ ಉತ್ತಮಪಡಿಸಬಹುದು ಎಂದರು.
ಕೊಳವೆ, ನೀರೆತ್ತುವ ಯಂತ್ರ ಮತ್ತು ರಾಸಾಯನಿಕಗಳು ನೀರಿನ ಜೀವವಾಹಕ ಶಕ್ತಿ ಕುಂದಿಸುತ್ತದೆ. ಶೋಧಿಸುವಿಕೆ, ಸ್ಟಿಲೇಷನ್ ಹಾಗೂ ರಿವರ್ಸ್ ಆಸ್ಮಾಸಿಸ್ನಂತಹ ಜಲಶುದ್ಧಿಕರಕ ತಂತ್ರಜ್ಞಾನ ನೀರಿನಲ್ಲಿರುವ ಪ್ರಮುಖ ಪೋಷಕಾಂಶ ಹೊರ ಹಾಕುತ್ತವೆ. ಇದರಿಂದ ನೀರಿನ ಸತ್ವ ಕಳೆದುಹೋಗುತ್ತಿದೆ ಎಂದು ಹೇಳಿದರು.
ಗ್ರೀನ್ಫೀಲ್ಡ್ ನ್ಯಾಚುರಲ್ಸ್ನ ಮೂರನೇ ತಲೆಮಾರಿನ ತಂತ್ರಜ್ಞಾನ ಹೊಂದಿರುವ ನೀರಿನ ವಿನ್ಯಾಸಗೊಳಿಸುವಿಕೆ ತಾಂತ್ರಿಕತೆಯಿಂದ ಅಮೆರಿಕದಲ್ಲಿ ಕೃಷಿ ಚಿತ್ರಣವೇ ಬದಲಾಗಿದೆ. ನೀರನ್ನು ಚೈತನ್ಯಗೊಳಿಸುವ ನಮ್ಮ ಘಟಕಗಳು ಶೋಧಕರಹಿತ, ರಾಸಾಯನಿಕರಹಿತ, ಉಪ್ಪುರಹಿತ ಆಗಿವೆ ಎಂದು ತಿಳಿಸಿದರು. ವಿನ್ಯಾಸಗೊಳಿಸಿದ ನೀರಿನಿಂದ ಆದಾಯ ಹೆಚ್ಚಳ, ನೀರಿನ ಬಳಕೆಯಲ್ಲಿ ಮಿತವ್ಯಯ, ನೀರಿನ ಆಂತರಿಕ ಬಳಕೆಯ ಹೆಚ್ಚಳ, ಉತ್ಪಾದನೆ ಹಾಗೂ ಉತ್ಪಾದಕತೆಯಲ್ಲಿ ಹೆಚ್ಚಳ, ಆಯಪದ ಅಭಿವೃದ್ಧಿ ಸೇರಿದಂತೆ ಹಲವಾರು ಉಪಯೋಗಗಳಿವೆ. ಇದರಿಂದ ಶೇ.30 ರಾಸಾಯನಿಕ ಮತ್ತು ರಸಗೊಬ್ಬರ ಬಳಕೆ ಕಡಿಮೆ ಮಾಡಬಹುದು. ಶೇ.20 ಇಳುವರಿ ಹೆಚ್ಚಿಸಬಹುದು. ರೋಗನಿರೋಧ ಮತ್ತು ಔಷಧಿಗಳ ಬಳಕೆ ಕಡಿಮೆ ಮಾಡಬಹುದು. ಇಳುವರಿ ಮತ್ತು ಆದಾಯವನ್ನು ದ್ವಿಗುಣಗೊಳಿಸಬಹುದು ಎಂದು ಹೇಳಿದರು. ಗ್ರೀನ್ಫೀಲ್ಡ್ ನ್ಯಾಚುರಲ್ಸ್ ಸಂಸ್ಥಾಪಕ ಹಾಗೂ ನಿರ್ದೇಶಕ ಗ್ಯಾರಿ ಗ್ರೀನ್ಫೀಲ್ಡ್, ವಿಜ್ಞಾನಿ ಡಾ. ಕೃಷ್ಣ ಮಾದಪ್ಪ, ಮೈಸೂರು ಆಕಾಶವಾಣಿ ಕೃಷಿರಂಗ ವಿಭಾಗದ ಕಾರ್ಯಕ್ರಮ ನಿರ್ವಾಹಕ ಎನ್. ಕೇಶವಮೂರ್ತಿ, ಬಾನುಲಿ ಕೃಷಿಕರ ಉತ್ಪಾದಕರ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೆ. ವೆಂಕಟೇಶ್ ಇದ್ದರು. ವಿಡಬ್ಲ್ಯೂಎಫ್ ಗ್ರೂಪ್ನ ಅಧ್ಯಕ್ಷ ಜಿ. ರಾಧಾಕೃಷ್ಣನ್ ಸ್ವಾಗತಿಸಿದರು.