ಅಧಿಕಾರಿಗಳಿಂದ ರಸ್ತೆಗಳ ಸರ್ವೇಕ್ಷಣೆ
ಕ.ಪ್ರ.ವಾರ್ತೆ , ಮೈಸೂರು , ಮೇ 17
ಅಂಗವಿಕಲರು ಹಾಗೂ ಹಿರಿಯ ನಾಗರಿಕರು ಸುಲಭವಾಗಿ ಸಂಚರಿಸಲು ಅನುವು ಮಾಡಿಕೊಡುವ ಹಿನ್ನೆಲೆಯಲ್ಲಿ ಅಂಗವಿಕಲರ ಕಲ್ಯಾಣ ಇಲಾಖೆ, ನಗರಪಾಲಿಕೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಶುಕ್ರವಾರ ನಗರದ ಪ್ರಮುಖ ರಸ್ತೆಗಳ ಸರ್ವೇಕ್ಷಣಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ಅಂಗವಿಕಲರ 1995ರ ಅಧಿನಿಯಮದ ಪ್ರಕಾರ ಅಂಗವಿಕಲರು ಸುಲಭವಾಗಿ ಸಂಚರಿಸಲು ರಸ್ತೆಗಳನ್ನು ವಿನ್ಯಾಸಗೊಳಿಸಬೇಕು. ಈ ನಿಯಮ ಸಾಕಷ್ಟು ಕಡೆಗಳಲ್ಲಿ ಉಲ್ಲಂಘನೆಯಾಗಿರುವುದನ್ನು ಕರ್ನಾಟಕ ಗ್ರಾಹಕರ ಪರಿಷತ್ ಪ್ರಶ್ನಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದಾವೆ ಸಲ್ಲಿಸಿತ್ತು. ಈ ಪ್ರಕರಣ ನಡೆಸಿದ ವೇದಿಕೆಯ ನ್ಯಾಯಾಧೀಶರು ರಸ್ತೆಗಳ ಸರ್ವೆಕ್ಷಣೆ ನಡೆಸಿ ಮೇ 22 ರೊಳಗೆ ವರದಿ ಸಲ್ಲಿಸುವಂತೆ ಅಂಗವಿಕಲರ ಕಲ್ಯಾಣ ಇಲಾಖೆಗೆ ಸೂಚಿಸಿತ್ತು.
ಈ ಸಂಬಂಧ ಅಂಗವಿಕಲರ ಕಲ್ಯಾಣಾಧಿಕಾರಿ ಬಲರಾಮ, ಅಂಗವಿಕಲರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಮುರಳೀಧರ್, ಪಾಲಿಕೆ ಉಪ ಆಯುಕ್ತ ರಾಜು, ದೇವರಾಜ ಸಂಚಾರ ಠಾಣೆಯ ಇನ್ಸ್ಪೆಕ್ಟರ್ ಸುಶೀಲಾ, ಎಎಸ್ಐ ಮರೀಗೌಡ, ಪಾಲಿಕೆ ಸಮುದಾಯ ಅಭಿವೃದ್ಧಿ ಅಧಿಕಾರಿ ಡಾ. ಭೈರಲಿಂಗಯ್ಯ, ಕರ್ನಾಟಕ ಗ್ರಾಹಕರ ವೇದಿಕೆ ಅಧ್ಯಕ್ಷ ಡಾ.ಎಸ್.ಪಿ. ತಿರುಮಲರಾವ್ ರಸ್ತೆ ಸರ್ವೇಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಎಲ್ಲೆಲ್ಲಿ ಏನು ಸಮಸ್ಯೆ?: ರಸ್ತೆಗಳಿಗೆ ಹೊಂದಿಕೊಂಡಂತಿರುವ ಪಾದಚಾರಿ ರಸ್ತೆಗಳು ಎತ್ತರವಿರುದು, ಸಿಗ್ನಲ್ಗಳಲ್ಲಿ ಕೆಂಪು ದೀಪ ಉರಿಯುತ್ತಿದ್ದರೂ ವಾಹನಗಳು ಸಂಚರಿಸುವುದು, ಸಾರ್ವಜನಿಕ ಕಟ್ಟಡಗಳು, ಬಸ್ ನಿಲ್ದಾಣಗಳಲ್ಲಿ ಇಳಿಜಾರು ಮಾಡದೆ ಮೆಟ್ಟಿಲು ನಿರ್ಮಿಸಿರುವುದನ್ನು ಗುರುತಿಸಲಾಯಿತು. ಕೆಳ ಸೇತುವೆಗಳು ರಸ್ತೆಯ ಮಟ್ಟದಿಂದ ಅತೀ ಎತ್ತರದಲ್ಲಿದ್ದು, ಇಲ್ಲಿ ಅಂಗವಿಕಲರು ಮತ್ತು ವಯೋವೃದ್ಧರು ನಡೆದಾಡಲು ಹರಸಾಹಸ ಪಡುತ್ತಿದ್ದಾರೆ.
ಇನ್ನು ಕೆಲವು ಕಡೆ ಮ್ಯಾನ್ಹೋಲ್ಗಳು ಮುಚ್ಚದೆ ಹಾಗೇ ಉಳಿದಿರುವ ಕಾರಣ ಇಲ್ಲಿ ಅಂಧರು ಹಾಗೂ ವಯೋವೃದ್ಧರು ಎಡವಿ ಬೀಳುವ ಸಾಧ್ಯತೆಗಳಿವೆ. ಇನ್ನು ಕೆಲವು ಸಿಗ್ನಲ್ಗಳಲ್ಲಿ ಅಂಗವಿಕಲರು, ವಯಸ್ಸಾದವರು ಮತ್ತು ಮಕ್ಕಳು ರಸ್ತೆ ದಾಟುವಾಗ ರೆಡ್ ಸಿಗ್ನಲ್ ಇದ್ದರೂ ವಾಹನಗಳು ಸಂಚರಿಸುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಅಂಗವಿಕಲರ ಅನುಕೂಲಕ್ಕಾಗಿ ನಗರದ ಬಹುತೇಕ ಕಾಲೇಜುಗಳು, ಕೆಎಸ್ಆರ್ಟಿಸಿ ಹಾಗೂ ನಗರ ಬಸ್ ನಿಲ್ದಾಣಗಳಲ್ಲಿ ರ್ಯಾಂಪ್ಗಳೇ ಇಲ್ಲದಿರುವ ಬಗ್ಗೆಯೂ ಗಮನ ಹರಿಸಲಾಯಿತು.
ಯಾವ ರಸ್ತೆಗಳಲ್ಲಿ ಸರ್ವೇಕ್ಷಣೆ?: ಕೆ.ಆರ್. ವೃತ್ತದಿಂದ ದೇವರಾಜ ಅರಸು ರಸ್ತೆ, ಪಂಜಾಬ್ ನ್ಯಾಶನಲ್ ಬ್ಯಾಂಕ್ ಮುಂಭಾಗದ ಫುಟ್ಪಾತ್, ಮಹಾರಾಣಿ ಕಾಲೇಜಿನ ಮುಂಭಾಗದಲ್ಲಿರುವ ಮೆಟ್ಟಿಲು ಹಾಗೂ ಫುಟ್ಪಾತ್, ಜೆಎಲ್ಬಿ ರಸ್ತೆ, ಬಸ್ನಿಲ್ದಾಣ, ದಾಸಪ್ಪ ಸರ್ಕಲ್, ಮೆಟ್ರೋಪೋಲ್ ರಸ್ತೆ, ಕೆಆರ್ಎಸ್ ರಸ್ತೆ ಅಂಡರ್ ಬ್ರಿಡ್ಜ್, ಜಾವಾ ಫ್ಯಾಕ್ಟರಿ ಅಂಡರ್ ಬ್ರಿಡ್ಜ್, ಸರಸ್ವತಿಪುರಂ ಫೈರ್ ಬ್ರಿಗೇಡ್ ರಸ್ತೆ, ಕೆ.ಜಿ. ಕೊಪ್ಪಲಿನ ಅಂಡರ್ ಬ್ರಿಡ್ಜ್, ಕುವೆಂಪುನಗರ ಮತ್ತು ಬೋಗಾದಿ ರಸ್ತೆಗಳಲ್ಲಿ ತಂಡ ಪರಿಶೀಲನೆ ನಡೆಸಿ ಅಲ್ಲಿನ ಸಮಸ್ಯೆಗಳನ್ನು ಕುರಿತು ಮಾಹಿತಿ ಕಲೆ ಹಾಕಿದರು.
ಇದೇ ವೇಳೆ ಪಾಲಿಕೆ ಉಪ ಆಯುಕ್ತ ರಾಜು ಮಾತನಾಡಿ, ನಗರ ಪಾಲಿಕೆಯಲ್ಲಿ ಅಂಗವಿಕಲರಿಗೆ ಮೀಸಲಿಟ್ಟಿರುವ ಶೇ.3ರ ಯೋಜನೆಯಲ್ಲಿ 1.71 ಕೋಟಿ ಅನುದಾನವಿದೆ. ಈ ಹಣವನ್ನು ಬಳಸಿಕೊಂಡು ಅಂಗವಿಕಲರು ಸುಲಭವಾಗಿ ಸಂಚರಿಸಲು ರಸ್ತೆಗಳು, ಮೆಟ್ಟಿಲುಗಳು, ಪಾದಾಚಾರಿ ರಸ್ತೆಗಳನ್ನು ವಿನ್ಯಾಸಗೊಳಿಸಲಾಗುವುದು ಎಂದರು.