ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಆಶ್ರಮಕ್ಕೆ ಜಾಗ: ನಿರ್ಧಾರ ವಾಪಸ್ ಪಡೆಯಲು ಆಗ್ರಹ

Vishwanath S
Updated On : 17 May 2013, 9:54 am

ಮೈಸೂರು: ನಗರದ ಮಹಾರಾಣಿ ಮಾದರಿ ಕನ್ನಡ ಶಾಲೆ (ಎನ್‌ಟಿಎಂಎಸ್) ಜಾಗವನ್ನು ಉಚಿತವಾಗಿ ಶ್ರೀರಾಮಕೃಷ್ಣಾಶ್ರಮಕ್ಕೆ ನೀಡಿರುವ ಹಿಂದಿನ ಸರ್ಕಾರದ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಕನ್ನಡ ಕ್ರಿಯಾ ಸಮಿತಿ ಮನವಿ ಮಾಡಿದೆ.
ಕಾಂಗ್ರೆಸ್ ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಪ್ರಣಾಳಿಕೆಯಲ್ಲಿ ಹೇಳಿದೆ. ಅದರ ಅನುಷ್ಠಾನವಾಗಿ ಮೊದಲ ಕಾರ್ಯಕ್ರಮವಾಗಿ ಈ ಶಾಲೆಯ ಸಮಾಧಿ ಮಾಡುವ ಹಿಂದಿನ ಸರ್ಕಾರದ ನಿರ್ಣಯವನ್ನು ಹಿಂತೆಗೆದುಕೊಳ್ಳಬೇಕೆಂದು ಸಮಿತಿಯ ಅಧ್ಯಕ್ಷ ಪ. ಮಲ್ಲೇಶ್, ಪ್ರಧಾನ ಕಾರ್ಯದರ್ಸಿ ಸ.ರ. ಸುದರ್ಶನ, ಖಜಾಂಚಿ ಕೊ.ಸು. ನರಸಿಂಹಮೂರ್ತಿ ಒತ್ತಾಯಿಸಿದ್ದಾರೆ.
ಹಿಂದಿನ ಸರ್ಕಾರದ ನಿರ್ಧಾರವನ್ನು ಜಿಲ್ಲಾ ಪಂಚಾಯತ್ ಪಕ್ಷಾತೀತವಾಗಿ ವಿರೋಧಿಸಿದೆ. ಹತ್ತಕ್ಕಿಂತ ಕಡಿಮೆ ಇರುವ ಶಾಲೆಯನ್ನು ಮಾತ್ರ ಮುಚ್ಚಲು ಸರ್ಕಾರಿ ಆದೇಶವಿದ್ದು, ಅದಕ್ಕಿಂತ ಹೆಚ್ಚು ಮಕ್ಕಳಿರುವ ಮಹಾರಾಣಿ ಮಾದರಿ ಶಾಲೆಯನ್ನು ಮುಚ್ಚುವುದು ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
20 ವರ್ಷಗಳ ಹಿಂದೆ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇಲ್ಲದಿದ್ದಾಗ ರಾಜ್ಯಕ್ಕೆ ಮಾದರಿಯಾದ ಹೆಮ್ಮೆಯ ಇತಿಹಾಸವಿರುವ ಈ ಶಾಲೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ಹೋಗಬೇಕು, ಈ ಶಾಲೆಯನ್ನು ಬೇರೆಡೆ ವಿಲೀನಗೊಳಿಸುವ ಬದಲು, ಅಕ್ಕಪಕ್ಕದ ಶಾಲೆಗಳನ್ನೇ ಇಲ್ಲಿಗೆ ವಿಲೀನಗೊಳಿಸಿ, ಶಾಲೆಯ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದರು. ಈಗ ಅಧಿಕಾರಕ್ಕೆ ಬಂದಾಗ, ಅವರ ಕಣ್ಣ ಮುಂದೆಯೇ ಅದರ ಸಮಾಧಿಯಾಗುವ ಪರಿಸ್ಥಿತಿ ಇರುವುದು ವಿಪರ್ಯಾಸ. ಆದ್ದರಿಂದ ಈ ಶಾಲೆಯನ್ನು ಉಳಿಸುವ ಸಲುವಾಗಿ ರಾಮಕೃಷ್ಣಾಶ್ರಮಕ್ಕೆ ಕೊಟ್ಟಿರುವ ಜಾಗವನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಜಿಪಂ ನಿರ್ಣಯಾನುಸಾರ ಮುಂದಿನ ಸಚಿವ ಸಂಪುಟದಲ್ಲಿ ತೆಗೆದುಕೊಳ್ಳಬೇಕೆಂದು ಅವರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement