ಧರ್ಮದಂತೆ ಸಾಹಿತ್ಯವೂ ಬದಲಾಯಿತು: ಅಂಜನ್
ಮೈಸೂರು: ವೈದಿಕ ಧರ್ಮಾಚರಣೆಯಲ್ಲಿದ್ದ ಕಷ್ಟಗಳಿಂದ ಬೇಸತ್ತ ಜನತೆ ಹೊಸ ಧರ್ಮಗಳತ್ತ ವಾಲಿದರು. ಅಂತೆಯೇ ಸಾಹಿತಿಗಳು ಕೂಡ ಜನರಿಗೆ ತಲುಪದ ಹಳಗನ್ನಡ ಬಿಟ್ಟು ನಡುಗನ್ನಡ ಸಾಹಿತ್ಯವನ್ನು ಸೃಷ್ಟಿಸಿದರು ಎಂದು ಮೇಲೂರು ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ವಿ.ಆರ್. ಅಂಜನ್ ಹೇಳಿದರು.
ಜ್ಞಾನಬುತ್ತಿ ಸಂಸ್ಥೆಯು ಎನ್ಟಿಎಂಎಸ್ ಶಾಲೆಯಲ್ಲಿ ಹಮ್ಮಿಕೊಂಡಿರುವ ಕನ್ನಡ ಸಾಹಿತ್ಯೋತ್ಸವದಲ್ಲಿ ನಡುಗನ್ನಡ ಕುರಿತು ಮಾತನಾಡಿದ ಅವರು, ನಡುಗನ್ನಡ ಸಾಹಿತ್ಯವು ಸಾಂಗತ್ಯ, ತ್ರಿಪದಿ, ಷಟ್ಪದಿ, ರಗಳೆ ಮುಂತಾದ ಸಾಹಿತ್ಯ ಪ್ರಕಾರಗಳನ್ನು ಹುಟ್ಟುಹಾಕಿತು. ವಚನ ಸಾಹಿತ್ಯ, ದಾಸ ಸಾಹಿತ್ಯ, ಜೈನ ಸಾಹಿತ್ಯ ಧರ್ಮವನ್ನು ಬೆಳೆಸುವ ಸಲುವಾಗಿ ಜೀವ ಪಡೆದುಕೊಂಡವು ಎಂದರು.
ಕರ್ನಾಟಕ ರಾಜ್ಯ ಮುಕ್ತ ವಿವಿ ಸಹಾಯಕ ಪ್ರಾಧ್ಯಾಪಕ ಡಾ.ಪಿ. ಮಣಿ ಅವರು ತೌಲನಿಕ ಸಾಹಿತ್ಯದ ಬಗ್ಗೆ ವಿಷಯ ಮಂಡಿಸಿದರು. ಡಾ.ಎಸ್. ನಾಗಾಚಾರ್, ಜ್ಞಾನಬುತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ, ಶ್ರೀನಿವಾಸ್, ಡಾ. ಪಳನಿಸ್ವಾಮಿ ಮುಡಗೂರು ಇದ್ದರು. ಬಲ್ಲೇನಹಳ್ಳಿ ಶಂಕರ್ ನಿರೂಪಿಸಿದರು.