ಮಂಚನಹಳ್ಳಿ: ಅವಳಿ ದೇಗುಲಗಳ ಉದ್ಘಾಟನೆ
ಕ.ಪ್ರ.ವಾರ್ತೆ , ಕೆ.ಆರ್. ನಗರ , ಮೇ 17
ತಾಲೂಕಿನ ಮಂಚನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಚಾಮುಂಡೇಶ್ವರಿ ಮತ್ತು ಈಶ್ವರ ದೇವರ ನೂತನ ವಿಗ್ರಹ ಪುನರ್ ಪ್ರತಿಷ್ಠಾಪನೆಯನ್ನು ಶುಕ್ರವಾರ ನೆರವೇರಿಸಲಾಯಿತು.
ಕನಕ ಗುರುಪೀಠದ ಶ್ರೀ ಶಿವಾನಂದಪರಿ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಸಾಲಿಗ್ರಾಮದ ವೇದ ಬ್ರಹ್ಮ ಸುಬ್ರಹ್ಮಣ್ಯ ಜೋಯಿಸರ ನೇತತ್ವದಲ್ಲಿ ದೇವರ ಪ್ರತಿಷ್ಠಾಪನೆ ಕಾರ್ಯ ನಡೆಯಿತು. ಕಳೆದ ಮೂರು ದಿನಗಳಿಂದ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಾಲಯಗಳನ್ನು ನಿರ್ಮಿಸಿಕೊಟ್ಟಿರುವ ಮಾಜಿ ಶಾಸಕ ಮಂಚನಹಳ್ಳಿ ಮಹದೇವ್ ಪತ್ನಿ ಅನುರಾಧಾ ಮಹದೇವ್ ಮತ್ತು ಕುಟುಂಬದವರು ಪಾಲ್ಗೊಂಡಿದ್ದರು.
ಬೆಳಗ್ಗೆ ಗರ್ಭಗೃಹ ಪ್ರವೇಶ, ಅಷ್ಟ ಬಂಧನ, ಉತ್ತರಾಂಗ ಹೋಮ, ಪ್ರಾಣ ಪ್ರತಿಷ್ಠೆ ಮಹಾಭಿಷೇಕವನ್ನು ಮಾಡಲಾಯಿತು. ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ ಪಾಲ್ಗೊಂಡು ಮಾತನಾಡಿ, ತಾಲೂಕಿನಲ್ಲಿ ಉತ್ತಮ ಮಳೆ- ಬೆಳೆಯಾಗಿ ರೈತರು ನೆಮ್ಮದಿ ಜೀವನ ನಡೆಸುವಂತೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದರು. ಜಿಲ್ಲಾ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಎಸ್. ಸಿದ್ದೇಗೌಡ, ಅಮಿತ್ ವಿ. ದೇವರಹಟ್ಟಿ, ಪುರಸಭಾ ಮಾಜಿ ಅಧ್ಯಕ್ಷ ನರಸಿಂಹರಾಜ್, ಮಾಜಿ ಉಪಾಧ್ಯಕ್ಷ ಶಿವಶಂಕರ್, ತಾಪಂ ಸದಸ್ಯೆ ಕಮಲಮ್ಮ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜಿ.ಎನ್. ಮಲ್ಲೇಗೌಡ, ರಾಜನಾಯಕ, ಲಾಳನಹಳ್ಳಿ ಉಮೇಶ್, ಹಿಂದುಳಿದ ವರ್ಗಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಜಿ.ಎಂ. ಹೇಮಂತ್, ಐಶ್ವರ್ಯ ಮಹದೇವ್ ಇದ್ದರು.