ಹಿಂದುಳಿದವರು, ದಲಿತರನ್ನು ಒಡೆಯುವ ಹುನ್ನಾರ: ಆರೋಪ
ಮೈಸೂರು: ಮುಖ್ಯಮಂತ್ರಿ ಗಾದಿಯ ನೆಪದಲ್ಲಿ ಬಿಜೆಪಿ, ಜೆಡಿಎಸ್ ಹಿಂದುಳಿದವರು ಹಾಗೂ ದಲಿತರನ್ನು ಒಡೆಯುವ ಹುನ್ನಾರ ನಡೆಸುತ್ತಿವೆ ಎಂದು ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮನ್ವಯ ವೇದಿಕೆ ಆರೋಪಿಸಿದೆ.
ಹಿಂದುಳಿದವರು ಮತ್ತು ದಲಿತರು ಪರಸ್ಪರ ಶತ್ರುಗಳಲ್ಲ. ಕೆಲವರು ಷಡ್ಯಂತ್ರ ರೂಪಿಸಿ, ಬಾಂಧವ್ಯ ಹಾಳು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವುದನ್ನು ನಾವು ಸ್ವಾಗತಿಸುತ್ತೇವೆ. ದಲಿತರ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಮಾಡುವಂತೆ ವರಿಷ್ಠರನ್ನು ಕೋರುತ್ತೇವೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿಜೆಪಿ ಆಡಳಿತದಿಂದ ಬೇಸತ್ತ ರಾಜ್ಯದ ಮತದಾರರು ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ, ಕರ್ನಾಟಕದ ಕೆಲ ಅಸ್ಪೃಶ್ಯ ದಲಿತರು ತಮ್ಮ ಸಮುದಾಯದ ನಾಯಕರನ್ನು ಉದ್ದೇಶಪೂರ್ವಕವಾಗಿಯೇ ಮುಖ್ಯಮಂತ್ರಿ ಹುದ್ದೆಯಿಂದ ವಂಚಿಸಲಾಗಿದೆ ಎಂದು ಭಾವಿಸಿ ಪ್ರತಿಭಟಿಸುತ್ತಿರುವುದು ತರವಲ್ಲ ಎಂದು ಹೇಳಿದರು.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ, ಎಂ. ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ್ ನಡುವೆ ಒಡಕು ಮೂಡಿಸಲು ಇನ್ನಿತರ ಪಕ್ಷಗಳು ಹವಣಿಸುತ್ತಿವೆ. ಆದ್ದರಿಂದ ಈ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಬೇಕು. ದಲಿತರಲ್ಲಿ ಭರವಸೆ ಮೂಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡು ಪರಮೇಶ್ವರ್ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಪದಾಧಿಕಾರಿಗಳಾದ ಸೋಮಯ್ಯ, ಎಂ.ಎನ್. ಶ್ರೀನಿವಾಸ್, ಶಿವಕುಮಾರ್ ಇದ್ದರು.