ಎಂಡಿಎ, ಪಾಲಿಕೆ ವಿರುದ್ಧ ಲೋಕಾಯುಕ್ತಗೆ ದೂರು
ಮೈಸೂರು: ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಿಗಾಗಿ ವಿಳಂಬ, ಲಂಚದ ಬೇಡಿಕೆ ಹಾಗೂ ಇನ್ನಿತರ ತೊಂದರೆ ನೀಡುವ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಮೈಸೂರಿನ ಲೋಕಾಯುಕ್ತ ಪೊಲೀಸರು ಚಾಮುಂಡಿ ಅತಿಥಿ ಗೃಹದಲ್ಲಿ ಸೋಮವಾರ ಸಾರ್ವಜನಿಕರಿಂದ ದೂರು ಸ್ವೀಕರಿಸಿದರು.
ಈ ಬಾರಿ ಒಟ್ಟಾರೆ 16 ದೂರುಗಳು ಬಂದಿದ್ದು, ಇದರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ನಗರಪಾಲಿಕೆ ವಿರುದ್ಧ ಹೆಚ್ಚಿನ ದೂರುಗಳಿವೆ. 5 ದೂರುಗಳು ಎಂಡಿಎ ಹಕ್ಕುಪತ್ರ ನೀಡಲು ವಿಳಂಬ, 6 ದೂರುಗಳು ನಗರಪಾಲಿಕೆಯು ಖಾತೆ ಬದಲಾವಣೆ, ಒಳಚರಂಡಿ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಸಂಬಂಧಿಸಿವೆ. ಉಳಿದಂತೆ ವಿವಿಧ ಇಲಾಖೆಗಳು, ಗ್ರಾಪಂ, ತಾಪಂ ಸಂಬಂಧಿಸಿದಂತೆ ಕೆಲಸ ಕಾರ್ಯಗಳ ವಿಳಂಬ ಹಾಗೂ ಲಂಚದ ಬೇಡಿಕೆ ಕುರಿತು ಸಾರ್ವಜನಿಕರು ದೂರು ನೀಡಿದ್ದಾರೆ. ಲೋಕಾಯುಕ್ತ ಪೊಲೀಸರು ಸಾರ್ವಜನಿಕರಿಂದ ಸ್ವೀಕರಿಸಿರುವ ದೂರುಗಳನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಪರಶುರಾಮ್, ಇನ್ಸ್ಪೆಕ್ಟರ್ ಧರ್ಮೇಂದ್ರ ಮತ್ತು ಸಿಬ್ಬಂದಿ ದೂರು ಸ್ವೀಕರಿಸಿದರು.