'ಗುರಿ ಸಾಧನೆಗೆ ಆತ್ಮವಿಶ್ವಾಸವಿರಲಿ'
ಕ.ಪ್ರ.ವಾರ್ತೆ , ಮೈಸೂರು , ಮೇ 20
ಯಾವುದೇ ಗುರಿ ಸಾಧನೆಗೆ ಆತ್ಮವಿಶ್ವಾಸ ಬಹುಮುಖ್ಯ ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎಂ. ಪುಟ್ಟು ಹೇಳಿದರು.
ಅಖಿಲ ಕರ್ನಾಟಕ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹಿತರಕ್ಷಣಾ ಸಂಘವು ಡಿ. ಬನುಮಯ್ಯ ಕಲಾಭವನದಲ್ಲಿ ದ್ವಿತೀಯ ಪಿಯುಸಿ ಅನುತ್ತಿರ್ಣಗೊಂಡಿರುವ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಉಚಿತ ಬೋಧನಾ ತರಗತಿಗಳನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ದಿಸೆಯಲ್ಲಿ ಮನಸ್ಸು ಚಂಚಲವಾಗುವುದು ಸಹಜ. ಆದರೆ ಮನಸ್ಸಿನ ಪಂಚೇಂದ್ರಿಯ ಶಕ್ತಿಗಳನ್ನು ನಿಯಂತ್ರಿಸುವ ಮೂಲಕ ಏಕಾಗ್ರತೆ ಹೊಂದಬೇಕು. ಜೀವನದಲ್ಲಿ ಸತತ ಪರಿಶ್ರಮ ರೂಢಿಸಿಕೊಂಡು ಛಲ ಬಿಡದೆ ಓದಿದಾಗ ನಿಶ್ಚಿತ ಗುರಿ ತಲುಪಲು ಸಾಧ್ಯ. ಅನುತ್ತೀರ್ಣರಾದ ವಿದ್ಯಾರ್ಥಿಗಳು ಯಾವುದೇ ಭಯ ಹಾಗೂ ಕೀಳರಿಮೆ ಇಟ್ಟುಕೊಳ್ಳದೆ ಪರೀಕ್ಷೆ ಎದುರಿಸುವಲ್ಲಿ ಆತ್ಮಸ್ಥೈರ್ಯ ಹೊಂದಬೇಕು ಎಂದರು.
ಈ ಹಿಂದೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಕೇವಲ ಪಾಸಾದರೆ ಸಾಕೆನ್ನುವ ಮನೋಭಾವವಿತ್ತು. ಆದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಮಾನ್ಯ ಅಂಕ ಗಳಿಕೆಗೆ ಬೆಲೆ ಇಲ್ಲವಾಗಿದೆ. ಹಾಗಾಗಿ ಪೈಪೋಟಿ ಯುಗದಲ್ಲಿ ಇತರರೊಂದಿಗೆ ಸ್ಪರ್ಧಿಸಬೇಕಾದರೆ ಹೆಚ್ಚಿನ ಅಂಕ ಗಳಿಸಬೇಕು. ಮೊಬೈಲ್ಗೆ ಆಕರ್ಷಿತರಾಗದೆ ದಿನದಲ್ಲಿ ಹತ್ತಾರು ಗಂಟೆ ಓದಿ ತಂದೆ ತಾಯಿಯ ಆಶಯ ಈಡೇರಿಸುವಲ್ಲಿ ಮುನ್ನಡೆಯಬೇಕು ಎಂದು ಆಶಿಸಿದರು.
ಅಭಿನಂದನೆ: ಜಿಲ್ಲೆಯಲ್ಲಿ ಕಳೆದ ಸಾಲಿಗಿಂತ ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ ಶೇ.10 ರಷ್ಟು ಫಲಿತಾಂಶ ಹೆಚ್ಚಳಕ್ಕೆ ಕಾರಣರಾಗಿರುವ ಎಲ್ಲಾ ಉಪನ್ಯಾಸಕರೂ ಅಭಿನಂದನಾರ್ಹರು. ಅಂತೆಯೇ ಅನುತ್ತಿರ್ಣರಾದವರಿಗೆ ಉಚಿತವಾಗಿ ಬೋಧನೆ ನಡೆಸಿಕೊಡುತ್ತಿರುವ ಸಂಘದ ಕಾರ್ಯ ಹಾಗೂ ಉಪನ್ಯಾಸಕರ ಅರ್ಪಣಾ ಮನೋಭಾವ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಿ. ಬನುಮಯ್ಯ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಪ್ರೊ.ಪಿ.ವಿ. ನರಹರಿ, ಅನುತ್ತೀರ್ಣರಾದವರು ದಡ್ಡರಲ್ಲ ಅಥವಾ ಪೆದ್ದರಲ್ಲ. ಅವರು ಎರಡೇ ಪಂಕ್ತಿಯ ವಿದ್ಯಾರ್ಥಿಗಳು ಎಂದು ಭಾವಿಸಬೇಕಿದೆ. ಇಂತಹ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವುದು ಶ್ರೇಷ್ಠ ಕಾರ್ಯ ಎಂದರು.
ಪ್ರಾಸ್ತಾವಿಕ ಮಾತುಗಳಾಡಿದ ಸಂಘದ ರಾಜ್ಯಾಧ್ಯಕ್ಷ ಈ. ಶಿವೇಗೌಡ, ಕಳೆದ ವರ್ಷ 104 ಮಂದಿ ತರಬೇತಿಗೆ ಹಾಜರಾಗಿದ್ದು ಇವರಲ್ಲಿ 83 ಮಂದಿ ಉತ್ತೀರ್ಣರಾಗಿದ್ದರು. ಈ ಬಾರಿ 182 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. .ಯಾವುದೇ ಶುಲ್ಕವಿಲ್ಲದೆ ಉಚಿತ ಬೋಧನೆ ಮಾಡಲಾಗುತ್ತಿದೆ ಎಂದರು.
ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಟಿ.ಎಸ್. ಶ್ರೀಕಂಠಶರ್ಮ, ಡಿ. ಬನುಮಯ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಂ. ಚಂದ್ರಶೇಖರ್, ಸಂಜೆ ಕಾಲೇಜಿನ ಪ್ರಾಂಶುಪಾಲ ಎಚ್.ಆರ್. ಸುರೇಶ್ ಮುಖ್ಯ ಅತಿಥಿಯಾಗಿದ್ದರು.
ಸಂಘದ ಗೌರವಾಧ್ಯಕ್ಷ ಜವರೇಗೌಡ, ಪ್ರಧಾನ ಕಾರ್ಯದರ್ಶಿ ಎ.ಎಲ್. ಉಮೇಶ್ ಇದ್ದರು. ಜಿಲ್ಲಾಧ್ಯಕ್ಷ ಚಿದಾನಂದಕುಮಾರ್ ಸ್ವಾಗತಿಸಿದರು. ಖಜಾಂಚಿ ಎಸ್. ಬಾಲಸುಬ್ರಹ್ಮಣ್ಯಂ ನಿರೂಪಿಸಿದರು. ಕಾರ್ಯದರ್ಶಿ ಎಂ.ಎಂ. ಮಹದೇವ್ ವಂದಿಸಿದರು.