ಚಾಮುಂಡಿಬೆಟ್ಟ ಭೂ ಹಗರಣ ತನಿಖೆಗೆ ಕಂದಾಯ ಸಚಿವರಿಗೆ ಸೂಚನೆ: ಸಿಎಂ
ಕ.ಪ್ರ.ವಾರ್ತೆ , ಮೈಸೂರು , ಮೇ 20
ಚಾಮುಂಡಿಬೆಟ್ಟ ಸುತ್ತಮುತ್ತ ನಡೆದಿರುವ ಸುಮಾರು 2000 ಎಕರೆಯಷ್ಟು ಭೂಹಗರಣದ ಬಗ್ಗೆ ತನಿಖೆ ನಡೆಸುವಂತೆ ಕಂದಾಯ ಸಚಿವರಿಗೆ ಸೂಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚಾಮುಂಡಿಬೆಟ್ಟದ ಭೂಹಗರಣದ ಬಗ್ಗೆ ಪ್ರತಿಪಕ್ಷದಲ್ಲಿದ್ದಾಗ ಪ್ರಸ್ತಾಪಿಸಿದ್ದು, ನಮ್ಮ ಸರ್ಕಾರ ಬಂದಲ್ಲಿ ತನಿಖೆ ನಡೆಸುವುದಾಗಿ ಹೇಳಿದ್ದೆ.
ಈಗ ಮೈಸೂರಿನವರೇ ಆದ ವಿ. ಶ್ರೀನಿವಾಸಪ್ರಸಾದ್ ಕಂದಾಯ ಸಚಿವರಾಗಿದ್ದು, ಈ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸೂಸೂಚಿಸಲಾಗುವುದು ಎಂದರು.
ಕಬಿನಿ 2ನೇ ಹಂತ; ತೀರ್ಪು ನೋಡಿಕೊಂಡು ಕ್ರಮ: ಮೈಸೂರು-ಚಾಮರಾಜನಗರ ಭಾಗದ ಬಹುದಿನಗಳ ಬೇಡಿಕೆಯಾದ ಕಬಿನಿ 2ನೇ ಹಂತದ ಯೋಜನೆ ಅನುಷ್ಠಾನದ ಬಗ್ಗೆ ಕಾವೇರಿ ಜಲ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿರುವ ಪ್ರಕರಣದ ತೀರ್ಪು ಬಂದ ನಂತರ ರಾಜ್ಯಕ್ಕೆ ದೊರಕುವ ನೀರಿನ ಲಭ್ಯತೆಯ ಆಧಾರದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಪಿರಿಯಾಪಟ್ಟಣದಲ್ಲಿ ಕಾಂಗ್ರೆಸ್ಗೆ ಗೆಲವು: ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಮೇ 28 ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ವೆಂಕಟೇಶ್ ಜಯ ಗಳಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಮೇ 5 ರಂದೇ ಚುನಾವಣೆ ನಡೆದಿದ್ದರೂ ನಾವೇ ಗೆಲ್ಲುತ್ತಿದ್ದವು. ಈಗಲೂ ನಾವೇ ಗೆಲ್ಲುತ್ತೇವೆ ಎಂದರು.