ಪುತ್ರಿಗಾಗಿ ನಕಲಿ ದಾಖಲೆ ಸೃಷ್ಟಿ:ಕಮಾಂಡೆಂಟ್ ವಿರುದ್ಧ ಕೇಸು
ಮೈಸೂರು: ಪುತ್ರಿಗೆ ಎಂಜಿನಿಯರಿಂಗ್ ಸೀಟು ಕೊಡಿಸಲು ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಮೈಸೂರಿನ ಅಶ್ವಾರೋಹಿದಳದ ಕಮಾಂಡೆಂಟ್ ಎಸ್.ಜಿ. ಮರಿಬಾಶೆಟ್ಟಿ ವಿರುದ್ಧ ನಜರ್ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಿಬಾಶೆಟ್ಟಿ ತಮ್ಮ ಪುತ್ರಿ ಕವಿತಾ ಭಾರತೀಯ ಈಕ್ವೆಸ್ಟ್ರಿಯನ್ ಫೆಡರೇಷನ್ 1997ರಲ್ಲಿ ನಡೆಸಿದ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದಾಗಿ ನಕಲಿ ಪ್ರಶಸ್ತಿ ಪತ್ರ ನೀಡಿ ಎಂಜಿನಿಯರಿಂಗ್ ಸೀಟು ಪಡೆದಿದ್ದಾರೆ. ಆದರೆ ಇದೇ ಕೋಟಾದಡಿ ಮತ್ತೊಬ್ಬ ಅಭ್ಯರ್ಥಿ ಅರ್ಜಿ ಸಲ್ಲಿಸಿದಾಗ ನಕಲಿ ದಾಖಲೆ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಕವಿತಾ ಎಂಬ ಹೆಸರಿನಲ್ಲಿ ಯಾರೂ 1997ರಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿಲ್ಲ ಎಂದು ಈಕ್ವೆಸ್ಟ್ರಿಯನ್ ಫೆಡರೇಷನ್ ಹೇಳಿದೆ. ಇದರಿಂದ ಸೀಟು ವಂಚಿತ ವಿದ್ಯಾರ್ಥಿ ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯದ ಆದೇಶದಂತೆ ಮರಿಬಾಶೆಟ್ಟಿ 10 ಸಾವಿರ ದಂಡ ಪಾವತಿಸಿದ್ದರು. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಮಂಜುನಾಥ್ ದಂಡ ವಿಧಿಸಿರುವ ಜತೆಗೆ ಶಿಸ್ತು ಕ್ರಮ ಏಕೆ ಕೈಗೊಂಡಿಲ್ಲ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದು, ನಜರ್ಬಾದ್ ಠಾಣೆಗೆ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಮರಿಬಾಶೆಟ್ಟಿ ವಿರುದ್ಧ ನಜರ್ಬಾದ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಎಲ್. ಸುಧೀರ್ ತಿಳಿಸಿದರು.