ಮೈಸೂರು ವಿವಿ ಉನ್ನತಿಗೆ 300 ಕೋಟಿ ಪ್ರಸ್ತಾವ
ಕ.ಪ್ರ.ವಾರ್ತೆ , ಮೈಸೂರು , ಮೇ 20
ಮೈಸೂರು ವಿವಿ ಉನ್ನತಿಗೊಳಿಸಲು 300 ಕೋಟಿ ಪ್ರಸ್ತಾವನೆಯನ್ನು ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಲು ನಿರ್ಧರಿಸಿರುವುದಾಗಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹೇಳಿದರು.
ಮಾನಸ ಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ಭಾರತೀಯ ಸೂಕ್ಷ್ಮಜೀವಶಾಸ್ತ್ರ ಸಂಘದ ಮೈಸೂರು ಶಾಖೆಯ ವಾರ್ಷಿಕ ಚಟುವಟಿಕೆ ಸಮಾರೋಪ ಸಮಾರಂಭದಲ್ಲಿ ಪ್ರಾಬ್ ಮೈಕ್ರೋಬ್ ಎಂಬ ಸಂಚಿಕೆಬಿಡುಗಡೆಗೊಳಿಸಿ ಮಾತನಾಡಿದರು.
2016ನೇ ಸಾಲಿನಲ್ಲಿ ಮೈಸೂರು ವಿವಿ ಶತಮಾನೋತ್ಸವ ಆಚರಿಸಲಿದ್ದು, ಈ ಅವಧಿಯೊಳಗೆ ದೇಶದ ಉನ್ನತ ವಿವಿಗಳಲ್ಲಿ ಮೈಸೂರು ವಿವಿ ಒಂದಾಗಬೇಕಿದೆ. ಈ ನಿಟ್ಟಿನಲ್ಲಿ 300 ಕೋಟಿ ಪ್ರಸ್ತಾವನೆ ಸಲ್ಲಿಸುತ್ತಿರುವುದಾಗಿ ಹೇಳಿದರು. ದೇಶದ ಜನರಿಗೆ ಸೂಕ್ಷ್ಮಾಣು ಜೀವಿಗಳಿಂದ ಹಲವು ಕಾಯಿಲೆಗಳು ಬರುತ್ತಿವೆ. ಶೇ.5 ರಷ್ಟು ಕಾಯಿಲೆಗಳ ನಿಯಂತ್ರಣ ಆಗುತ್ತಿದೆ. ಶೇ.95 ಕಾಯಿಲೆಗಳ ನಿಯಂತ್ರಣಕ್ಕೆ ಸಂಶೋಧನೆಗಳು ಕೈಗೊಳ್ಳಬೇಕಿದೆ. ಎಂದರು.
ಕುಕ್ಕರಹಳ್ಳಿ ಕೆರೆ ರಕ್ಷಣೆ: ಕಲುಷಿತಗೊಂಡಿರುವ ಕುಕ್ಕರಹಳ್ಳಿಕೆರೆಯನ್ನು ಸಂರಕ್ಷಿಸಿ, ಕೆರೆಯ ನೀರನ್ನು ಶುದ್ಧೀಕರಿಸಬೇಕಿದೆ. ಈ ನಿಟ್ಟಿನಲ್ಲಿ ಸೂಕ್ಷ್ಮಜೀವಶಾಸ್ತ್ರಜ್ಞರು ಸಂಶೋಧನೆ ಕೈಗೊಳ್ಳಬೇಕಿದೆ. ಕುಕ್ಕರಹಳ್ಳಿ ಕೆರೆಯಲ್ಲಿರುವ ನೀರನ್ನು ಶುದ್ಧಿಕರಿಸಿದರೆ ಮಾನಸಗಂಗೋತ್ರಿಗೆ ಸಂಪೂರ್ಣವಾಗಿ ಬಳಸಬಹುದಾಗಿದೆ ಎಂದು ಹೇಳಿದರು.
ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಸಂಶೋಧನಾ ಅಭ್ಯರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕೊಯಮತ್ತೂರಿನಲ್ಲಿರುವ ತಮಿಳುನಾಡು ಕೃಷಿ ವಿವಿ ಕುಲಪತಿ ಡಾ.ಕೆ. ರಾಮಸ್ವಾಮಿ ಅವರು ಸಮಾರೋಪ ಭಾಷಣ ಮಾಡಿದರು. ಸಂಘದ ಅಧ್ಯಕ್ಷ ಪ್ರೊ.ಜಿ.ಆರ್. ಜನಾರ್ಧನ, ಕಾರ್ಯದರ್ಶಿ ಡಾ.ಎಂ.ವೈ. ಶ್ರೀನಿವಾಸ, ಸಿಪಿಎಫ್ಟಿಆರ್ಐ ವಿಜ್ಞಾನಿ ಡಾ.ಜಿ. ವೆಂಕಟೇಶ್ವರನ್ ಇದ್ದರು.