ನಾಳೆ ಗಾನಗಂಧರ್ವ ಪಿ.ಬಿ. ಶ್ರೀನಿವಾಸ್ ನೆನಪು
ಕ.ಪ್ರ.ವಾರ್ತೆ , ಮೈಸೂರು , ಮೇ 23
ಕನ್ನಡ ಚಿತ್ರರಂಗದ ಹೆಸರಾಂತ ಹಿನ್ನೆಲೆ ಗಾಯಕ ಡಾ.ಪಿ.ಬಿ. ಶ್ರೀನಿವಾಸ್ ಅವರ ನೆನಪು ಕಾರ್ಯಕ್ರಮ ಮೇ 25ರಂದು ನಗರದ ಜಗನ್ಮೋಹನ ಅರಮನೆಯಲ್ಲಿ ನಡೆಯಲಿದೆ.
ಪಾತಿ ಫೌಂಡೇಷನ್ ವತಿಯಿಂದ ಏರ್ಪಡಿಸಿರುವ ಈ ಕಾರ್ಯಕ್ರಮವನ್ನು ಅಂದು ಸಂಜೆ 6ಕ್ಕೆ ಗಣ್ಯರು ಉದ್ಘಾಟಿಸುವರು ಎಂದು ಸಂಸ್ಥೆ ಅಧ್ಯಕ್ಷ ಹಾಗೂ ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪಿಬಿಎಸ್ ಕಂಠಸಿರಿಯಲ್ಲಿ ಹಾಡುವ ಗಾಯಕರಾದ ಗಂಗಾಧರ್, ನಾಗೆಂದ್ರ, ಸೂರಜ್ ಹಾಗೂ ರಾಘವೇಂದ್ರರಾವ್ ಅವರನ್ನು ಸನ್ಮಾನಿಸಲಾಗುವುದು. ಈ ಸಂದರ್ಭದಲ್ಲಿ ಜಾದೂಗಾರ್ ಗುರುಸ್ವಾಮಿ ಅವರಿಂದ ಮ್ಯಾಜಿಕ್ ಶೋ ಏರ್ಪಡಿಸಲಾಗಿದೆ ಎಂದರು.
ಮೈಸೂರಿನ ಹೆಸರಾಂತ ಶ್ರೀನಿವಾಸ್ ತಂಡದವರು ಡಾ. ಪಿ.ಬಿ. ಶ್ರೀನಿವಾಸ್ ಅವರು ಹಾಡಿರುವ ಚಲನಚಿತ್ರ ಗೀತೆ ಹಾಡುವರು ಎಂದು ತಿಳಿಸಿದರು.
1960ರಲ್ಲಿ ಜಾತಕ ಫಲ ಚಿತ್ರದ ಮೂಲಕ ಗಾಯನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಅವರು ಭಕ್ತ ಕನಕದಾಸ, ಭಕ್ತ ಶಬರಿ, ಮಂತ್ರಾಲಯ ಮಹಾತ್ಮೆ, ಭಕ್ತಕುಂಬಾರ ಸೇರಿದಂತೆ ಅನೇಕ ಆಧ್ಯಾತ್ಮಿಕ ಚಿತ್ರಗಳಲ್ಲಿ ಹಾಡಿ ಪ್ರಖಾತರಾಗಿದ್ದ ಅವರು, ಕೌಟುಂಬಿಕ ಹಾಗೂ ಭಾವಪ್ರಧಾನ ಗೀತೆಗಳನ್ನು ಹಾಡಿ ಕನ್ನಡಿಗರ ಮನಸೂರೆಗೊಂಡಿದ್ದರು ಎಂದು ಸ್ಮರಿಸಿದರು.
ಆಂಧ್ರಪ್ರದೇಶ ಕಾಕಿನಾಡದಲ್ಲಿ ಜನಿಸಿದ ಡಾ. ಪಿ.ಬಿ. ಶ್ರೀನಿವಾಸ್ ಅವರು ಓದಿದ್ದು ಬಿ.ಕಾಂ. ಅವರನ್ನು ಕನ್ನಡ ಚಿತ್ರರಂಗಕ್ಕೆ ಆರ್. ನಾಗೇಂದ್ರರಾವ್ ಅವರು ಪರಿಚಯಿಸಿದರು. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಉರ್ದು, ಇಂಗ್ಲಿಷ್ ಭಾಷೆಗಳಲ್ಲಿನ 3 ಸಾವಿರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಹಿನ್ನೆಲೆ ಗಾಯಕರಾಗಿ ಹಾಡಿದ್ದಾರೆ ಎಂದು ತಿಳಿಸಿದರು.
ರಾಘವೇಂದ್ರ ರತ್ನಾಕರ್, ಬಸವರಾಜು, ಮಹದೇವು, ರವಿ, ಸುರೇಶ್ ಇದ್ದರು.