ಯೋಜನೆ ಯಶಸ್ವಿಗೆ ಸಹಕಾರ ಅಗತ್ಯ
ಹುಣಸೂರು: ಗ್ರಾಮೀಣ ಹಾಗೂ ನಗರ ಪ್ರದೇಶಗಳ ಎಲ್ಲ ವರ್ಗದ ಮಕ್ಕಳ ಶೈಕ್ಷಣಿಕ ಉನ್ನತಿಗಾಗಿ ಕೇಂದ್ರ ಸರ್ಕಾರ ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬುನಾದಿ ಹಾಕುತ್ತಿದೆ ಎಂದು ಶಿಕ್ಷಣ ಇಲಾಖೆಯ ಸಂಪನ್ಮೂಲ ತಜ್ಞ ತ್ರಿಣೇಶ್ ಹೇಳಿದರು. ಕೇಂದ್ರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನೆ ಆಶ್ರಯದಲ್ಲಿ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಸರ್ವ ಶಿಕ್ಷಣ ಅಭಿಯಾನ ಕುರಿತು ಹಮ್ಮಿಕೊಂಡ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 14 ವರ್ಷದೊಳಗಿನ ಎಲ್ಲ ಮಕ್ಕಳು ಯಾವುದೇ ಕಾರಣದಿಂದ ಔಪಚಾರಿಕ ಶಾಲಾ ಶಿಕ್ಷಣದಿಂದ ವಂಚಿತರಾಗಬಾರದು. ಈ ಯೋಜನೆ ನಿರೀಕ್ಷಿತ ಫಲ ನೀಡಲು ಪೋಷಕರ ಸಂಪೂರ್ಣ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು. ಶಿಕ್ಷಕರಾದ ಚೆನ್ನೇಗೌಡ, ರವಿಶಂಕರ್ ಮಾತನಾಡಿ, ಯಾವುದೇ ವಿದ್ಯಾರ್ಥಿಗಳನ್ನು ಮಧ್ಯದಲ್ಲಿ ಶಾಲೆ ಬಿಡಿಸದೆ ಅವರ ಶಿಕ್ಷಣಕ್ಕೆ ಸೂಕ್ತ ಬೆಂಬಲವನ್ನು ಪೋಷಕರು ನೀಡುವಂತೆ ಕೋರಿದರು.
ಕನಕದಾಸ ಶಾಲೆಗೆ ಅರ್ಜಿ ಆಹ್ವಾನ
ನಂಜನಗೂಡು: ಕನಕದಾಸ ಸಾರ್ವಜನಿಕ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಂಜನಗೂಡಿನಲ್ಲಿ ನಡೆಯುತ್ತಿರುವ ಕನಕದಾಸ ಸಾರ್ವಜನಿಕ ಪೂರ್ವ ಪ್ರಾಥಮಿಕ ಶಾಲೆಗೆ ಎಲ್ಕೆಜೆ, ಯುಕೆಜಿ, 1 ರಿಂದ 4ನೇ ತರಗತಿವರೆಗೆ ಪ್ರವೇಶ ಅವಕಾಶವಿದೆ. 5 ರಿಂದ 7ನೇ ತರಗತಿವರೆಗೆ ಸರ್ಕಾರದ ಅನುದಾನಕ್ಕೆ ಒಳಪಟ್ಟಿದ್ದು, ಈ ಶಾಲೆಗೆ ದಾಖಲಾಗುವ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನ ಬಿಸಿಯೂಟ ಮತ್ತು ಶುಲ್ಕ ಉಚಿತವಾಗಿರುತ್ತದೆ. ಪ್ರೌಢಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಊಟ, ವಿದ್ಯಾರ್ಥಿನಿಯರಿಗೆ ಸೈಕಲ್ ಉಚಿತವಾಗಿ ನೀಡಲಾಗುತ್ತದೆ. 5 ರಿಂದ 10ನೇ ತರಗತಿಯ ಬಾಲಕರಿಗಾಗಿ ವಿದ್ಯಾರ್ಥಿನಿಲಯ ವ್ಯವಸ್ಥೆ ಇದೆ. ಕೆಂಪಿಸಿದ್ದನಹುಂಡಿಯಲ್ಲಿರುವ ಕನಕದಾಸ ಸಾರ್ವಜನಿಕ ಪ್ರೌಢಶಾಲೆಯಲ್ಲಿ 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶವಿದೆ. ಎಲ್ಲಾ ಶಾಲೆಗಳಲ್ಲೂ ನುರಿತ ಅನುಭವುಳ್ಳ ಶಿಕ್ಷಕರಿಂದ ಬೋಧನೆ, ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಲಾಗುತ್ತಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಎನ್.ಎಸ್. ಮಹದೇವ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. 9845590335 ಸಂಪರ್ಕಿಸಬಹುದು.
ಕನ್ನಡ ಶಾಲೆ ಮುಚ್ಚದಿರಿ
ಮೈಸೂರು: ಶತಮಾನದ ಹಿಂದೆ ಮೈಸೂರು ಪ್ರಾಂತ್ಯದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಬಾಗಿಲು ತೆರೆದ ಮೊಟ್ಟಮೊದಲ ಶಾಲೆ ಮುಚ್ಚಿ, ಅದರ ಸಮಾಧಿಯ ಮೇಲೆ ವಿವೇಕಾನಂದ ಸ್ಮಾರಕ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಕನ್ನಡ ಕ್ರಿಯಾ ಸಮಿತಿಯು ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಪತ್ರ ಬರೆದಿದೆ.ವಿವೇಕಾನಂದ ಸ್ಮಾರಕ ನಿರ್ಮಿಸಲು ಕನ್ನಡ ಶಾಲೆ ಕೆಡವುತ್ತಿರುವುದು ಕನ್ನಡಿಗರ ಭಾವನೆಗೆ ಧಕ್ಕೆ ತಂದಿದೆ. ಅಲ್ಲದೆ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಇರುವ ಅತ್ಯುತ್ತಮ ಶಾಲೆ ಇದಾಗಿದೆ. ಮೈಸೂರು ಸಂಸ್ಥಾನದ ಚಾಮರಾಜ ಒಡೆಯರ್ ತಮ್ಮ ಮಡದಿ ವಾಣಿವಿಲಾಸ ಸನ್ನಿಧಿಯ ಸಲಹೆ ಮೇರೆಗೆ 1881ರಲ್ಲಿ ಸ್ಥಾಪಿಸಿದ ಈ ಶಾಲೆ ಹೆಣ್ಣು ಮಕ್ಕಳ ಶಿಕ್ಷಣದ ಬಾಗಿಲು ತೆರೆದ ಮೊದಲ ಶಾಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಎಂದು ಸಮಿತಿ ತಿಳಿಸಿದೆ.ಶಾಲೆಗೆ ಹೊಂದಿಕೊಂಡಿರುವ ಸ್ಥಳದಲ್ಲಿ ಈಗಾಗಲೆ ಸುಂದರವಾದ ವಿವೇಕಾನಂದ ಸ್ಮಾರಕ ಇದೆ. ಅದನ್ನು ಮತ್ತಷ್ಟು ಉತ್ತಮವಾಗಿ ರೂಪಿಸಲಿ. ರಾಮಕೃಷ್ಣಾಶ್ರಮದ ಯುವಸ್ಫೂರ್ತಿ ಕೇಂದ್ರವನ್ನು ವಿವೇಕಾನಂದರು ಓಡಾಡಿದ ಮೈಸೂರು ನಗರದ ಬೇರೆಲ್ಲಿಯಾದರೂ ಸ್ಥಾಪಿಸಬಹುದು ಎಂದು ಸಮಿತಿ ಅಧ್ಯಕ್ಷ ಪ. ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಸ.ರ. ಸುದರ್ಶನ, ಕಾರ್ಯದರ್ಶಿ ಸಂಸ್ಕೃತಿ ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಐಸಿಎಸ್ಇನಲ್ಲಿ ಅಭಿಷೇಕ್ ಸಾಧನೆ
ಮೈಸೂರು: ಈ ಸಾಲಿನ 10 ನೇ ತರಗತಿಯ ಐಸಿಎಸ್ಇ ಪಠ್ಯಕ್ರಮದ ಪರೀಕ್ಷೆಯಲ್ಲಿ ಆಚಾರ್ಯ ವಿದ್ಯಾಕುಲದ ವಿದ್ಯಾರ್ಥಿ ಅಭಯ್ ಕೌಶಿಕ್ 94.3 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾನೆ.
ಮಾದಿಗ ರಕ್ಷಣಾ ಮಹಾಸಭಾ ಪ್ರತಿಭಟನೆ
ಕ.ಪ್ರ.ವಾರ್ತೆ , ಮೈಸೂರು , ಮೇ 23
ಜನಸಂಖ್ಯೆ ಅನುಗುಣವಾಗಿ ಹೊಸ ಸರ್ಕಾರ ಮಾದಿಗ ಜನಾಂಗಕ್ಕೆ ರಾಜಕೀಯ ಅಧಿಕಾರ ನೀಡಬೇಕು ಎಂದು ಆಗ್ರಹಿಸಿ ಮಾದಿಗ ರಕ್ಷಣಾ ಮಹಾಸಭಾದವರು ಗುರುವಾರ ಪ್ರತಿಭಟಿಸಿದರು.
ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಪ್ರತಿಭಟಿಸಿದ ಅವರು, ಪುರಭವನ, ಗಾಂಧಿ ಚೌಕದ ಮೂಲಕ ಕಾಂಗ್ರೆಸ್ ಕಚೇರಿಗೆ ತಲುಪಿ ಪ್ರತಿಭಟನೆ ಅಂತ್ಯಗೊಳಿಸಿದರು.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಜನಾಂಗದವರು ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಸರ್ಕಾರ ರಚಿಸಲು ಅಭೂತಪೂರ್ವ ಬೆಂಬಲ ನೀಡಿರುವುದು ಚುನಾವಣಾ ಫಲಿತಾಂಶದಿಂದ ವ್ಯಕ್ತವಾಗಿದೆ. ರಾಜ್ಯದಲ್ಲಿ ಬಹುಸಂಖ್ಯಾತರಾದ ನಮ್ಮ ಸಮುದಾಯವು, ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತದಾರರಾಗಿದ್ದೇವೆ. ನಮ್ಮ ಜನಾಂಗದ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಿರುವುದರಿಂದ ಅನ್ಯಾಯವಾಗಿದೆ ಎಂದು ಅವರು ಆರೋಪಿಸಿದರು. ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಇನ್ನೂ ಇಬ್ಬರಿಗೆ ಮಾದಿಗ ಸಮುದಾಯದವರಿಗೆ ಸ್ಥಾನ ನೀಡಬೇಕು. ನಿಗಮ ಮಂಡಳಿ, ಸ್ಥಳೀಯ ಸಂಸ್ಥೆಗಳ ನೇಮಕ ಹಾಗೂ ವಿಧಾನಪರಿಷತ್ಗೆ ನಾಮಕಾರಣ ಮಾಡುವಾಗ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ನೀಡಬೇಕು. ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಮಹಾಸಭಾದ ರಾಜ್ಯಾಧ್ಯಕ್ಷ ಜೆ.ಸಿ. ಇತಿಹಾಸ್, ಹಿರಿಯ ಉಪಾಧ್ಯಕ್ಷ ಕೆಂಪಯ್ಯ ಮೊದಲಾದವರು ಇದ್ದರು.