ಮೈಸೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಜರ್ಬಾದ್ ಪೊಲೀಸ್ ಠಾಣೆಯ ಅಮಾನತ್ತುಗೊಂಡ ಇನ್ಸ್ಪೆಕ್ಟರ್ ಜಿ.ಎನ್. ಮೋಹನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗಾಯಿತ್ರಿಪುರಂ ನಿವಾಸಿ ಪುಟ್ಟಮಾದೇವ ಎಂಬವರು ವೈದ್ಯ ಡಾ. ಶ್ರೀಕಂಠೇಗೌಡ ಎಂಬವರಿಂದ ಸಾಲ ಪಡೆದಿದ್ದರು. ಸಾಲ ಹಿಂದಿರುಗಿಸಲು ತಡವಾದ ಹಿನ್ನೆಲೆಯಲ್ಲಿ ಪುಟ್ಟಮಾದೇವ ವಿರುದ್ಧ ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಶ್ರೀಕಂಠೇಗೌಡ ದೂರು ದಾಖಲಿಸಿದ್ದರು. ಈ ಸಂಬಂಧ ತಮ್ಮನ್ನು ಕಳೆದ 2011ರ ನ. 26ರಂದು ಅಕ್ರಮ ಬಂಧನದಲ್ಲಿಟ್ಟು, 10 ಸಾವಿರ ಮತ್ತು 6 ಸಾವಿರ ಮೊತ್ತದ 2 ಚೆಕ್ ಪಡೆದದ್ದು ಮಾತ್ರವಲ್ಲದೆ ಖಾಲಿ ಚೆಕ್ಗೆ ಸಹಿ ಕೂಡ ಹಾಕಿಸಿಕೊಂಡಿದ್ದಾರೆ ಎಂದು ಆರೋಪಿಸಿ ಪುಟ್ಟಮಾದೇವ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಮೊದಲ ಆರೋಪಿ ಡಾ. ಶ್ರೀಕಂಠೇಗೌಡ, 2ನೇ ಆರೋಪಿ ಜಿ.ಎನ್. ಮೋಹನ್, ಸಿಬ್ಬಂದಿಯಾದ ಅನಿಲ್ ಶಂಕ್ಪಾಲ್, ದೇವರಾಜೇ ಅರಸ್, ಮಹೇಶ್ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ದೇವರಾಜ ಎಸಿಪಿ ಅಂಜಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ತಮಗೆ ಯಾವುದೆ ಮಾಹಿತಿ ಇಲ್ಲ ಎಂದು ನಗರ ಪೊಲೀಸ್ ಆಯುಕ್ತ ಕೆ.ಎಲ್. ಸುಧೀರ್ ತಿಳಿಸಿದ್ದಾರೆ.